ಯಲ್ಲಾಪುರ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಜು.20 ರಂದು ಬೆಳಗ್ಗೆ 10.30 ಕ್ಕೆ ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ ಹೇಳಿದರು.
ಅವರು ಪಟ್ಟಣದಲ್ಲಿ ಸೋಮವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾಧ್ಯಮದವರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ಆರೋಗ್ಯ ಜಾಗೃತಿಯಲ್ಲಿ ಮಾಧ್ಯಮಗಳ ಪಾತ್ರದ ಕುರಿತು ನೇತ್ರತಜ್ಞೆ ಡಾ.ಸೌಮ್ಯಾಕೆ.ವಿ. ಉಪನ್ಯಾಸ ನೀಡಲಿದ್ದಾರೆ. ಕವಿ, ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಬರಹಗಾರ ದತ್ತಾತ್ರೇಯ ಕಣ್ಣಿಪಾಲ, ಪತ್ರಿಕಾ ವಿತರಕ ದೀಪಕ ಕಲಾಲ್ ಹಾಗೂ ಸಾತೊಡ್ಡಿ ಜಲಪಾತದ ಸ್ವಚ್ಛತಾ ನಿರ್ವಾಹಕಿ ತುಂಗಮ್ಮ ಪಟಗಾರ ಅವರನ್ನು ಸನ್ಮಾನಿಸಲಾಗುವುದೆಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾ ಪತ್ರಿಕಾ ಮಂಡಳಿಯ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಪಾಟೀಲ, ತಹಸೀಲ್ದಾರ ಅಶೋಕ ಭಟ್ಟ, ಡಿಸಿಎಫ್ ಹರ್ಷ ಭಾನು, ತಾ.ಪಂ ಇಒ ಎನ್.ಆರ್.ಹೆಗಡೆ, ಚಂದಗುಳಿ ಗ್ರಾ.ಪಂ ಅಧ್ಯಕ್ಷೆ ಶಿಲ್ಪಾ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ ಇತರರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಭಾವತಿ ಗೋವಿ, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಅಣಲಗಾರ, ಸದಸ್ಯ ಜಯರಾಜ ಗೋವಿ, ಸವಣಗೇರಿ ಶಾಲೆಯ ಮುಖ್ಯಾಧ್ಯಾಪಕ ಸಂಜೀವಕುಮಾರ ಹೊಸ್ಕೇರಿ ಉಪಸ್ಥಿತರಿದ್ದರು.