ಪಿಡಿಓ ಮೊಹರನ್ನು ದುರ್ಬಳಕೆ ಮಾಡುತ್ತಿರುವ ಕಾರ್ಯದರ್ಶಿ ದುರ್ವರ್ತನೆಗೆ ಬೇಸತ್ತ ಜನತೆ
ದಾಂಡೇಲಿ : ನಗರದ ಸಮೀಪದಲ್ಲಿರುವ ಜೋಯಿಡಾ ತಾಲೂಕಿನ ಅತ್ಯುತ್ತಮ ಪ್ರದೇಶ ವ್ಯಾಪ್ತಿಯಲ್ಲಿ ಪ್ರಧಾನಿಯು ಒಂದು. ಸಮೃದ್ಧ ಹಾಗೂ ದಟ್ಟ ಕಾಡಿನ ಮಧ್ಯೆ ಊರ ಜನರಿಗೆ ಅನುಕೂಲವಾಗಲೆಂದು ಇರುವ ಕಚೇರಿಯೇ ಪ್ರಧಾನಿ ಗ್ರಾಮ ಪಂಚಾಯತ್.
ಸಾಕಷ್ಟು ವರ್ಷಗಳ ಹಿಂದೆಯೇ ಇಲ್ಲಿ ಗ್ರಾಮ ಪಂಚಾಯಿತಿಯನ್ನು ತೆರೆಯಲಾಗಿತ್ತು. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕಾದ ಈ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮಾತ್ರ ಪಿಡಿಓ ಇಲ್ಲದ ಸಮಯದಲ್ಲಿ ಪಿಡಿಓರವರ ಮೊಹರನ್ನು ಬಳಸಿ ಎನ್.ಓ.ಸಿ ಕೊಡುವ ಮೂಲಕ ಬಹಳ ದೊಡ್ಡ ಪ್ರಮಾಣದ ಪ್ರಮಾದ ಎಸಗಿರುವ ಬಗ್ಗೆ ಗುಸು ಗುಸು ಚರ್ಚೆಯಾಗತೊಡಗಿದೆ. ಇಡೀ ಗ್ರಾಮ ಪಂಚಾಯಿತಿಯನ್ನೇ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ರೀತಿಯಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯ ದುರ್ವರ್ತನೆ ಕಂಡು ಬರತೊಡಗಿದೆ.
ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯನ್ನು ನಿಯಂತ್ರಿಸಬೇಕಾದ ಗುರುತರವಾದ ಜವಾಬ್ದಾರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರದ್ದಾಗಿದೆ. ಅನೇಕ ಪ್ರಮಾದಗಳನ್ನು ಎಸಗಿರುವ, ಎಸಗುತ್ತಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂಪೂರ್ಣ ಎಡವಿದ್ದಾರೆ ಎಂದೇ ಹೇಳಬಹುದು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಈ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯ ಎಲ್ಲಾ ಎಡವಟ್ಟುಗಳ ಗುಟ್ಟು ರಟ್ಟಾಗುತ್ತಿರುವುದು ಗೊತ್ತಾದರೂ ಕ್ರಮ ಕೈಗೊಳ್ಳದೆ ಇರಲು ಕಾರಣಗಳೇನು ಎನ್ನುವ ಹತ್ತು ಹಲವು ಅನುಮಾನಗಳು ಜೋಯಿಡಾ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರ ಮೇಲಿದೆ.
ಇನ್ನೂ ಇದೇ ಗ್ರಾಮ ಪಂಚಾಯಿತಿಯಲ್ಲಿ ಈ ಕಾರ್ಯದರ್ಶಿಯನ್ನು ಉಳಿಸಿಕೊಳ್ಳಬೇಕಾದ ನಿಟ್ಟಿನಲ್ಲಿ ಪ್ರಾಮಾಣಿಕ ಪಿಡಿಒ ಅಧಿಕಾರಿಯನ್ನು ಎತ್ತಂಗಡಿ ಮಾಡುವ ಕಾರ್ಯವು ತೆರೆಮರೆಯಲ್ಲಿ ನಡೆಯುತ್ತಿದೆ.
ಒಂದಂತು ನಿಜ, ಇದೇ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯನ್ನು ಇಲ್ಲಿಂದ ಎತ್ತಂಗಡಿ ಮಾಡದೇ ಇದ್ದರೇ, ರಾಜ್ಯ ಕಂಡ ಮುತ್ಸದಿ ಜನನಾಯಕ ಆರ್.ವಿ. ದೇಶಪಾಂಡೆಯವರ ಅಭಿವೃದ್ಧಿ ಕಾರ್ಯಗಳಿಗೂ ತೊಡಕಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಜೋಯಿಡಾ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಪ್ರಾಮಾಣಿಕರನ್ನು ಬೆಂಬಲಿಸಿ, ಭ್ರಷ್ಟರಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕಾಗಿದೆ. ಅದು ಯಾವಾಗ ಎನ್ನುವ ಪ್ರಶ್ನೆಗೆ ಜೋಯಿಡಾ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರೆ ಉತ್ತರಿಸಬೇಕಾಗಿದೆ.