ಅಂಕೋಲಾ: ತಾಲ್ಲೂಕಿನ ಬಾಳೆಗೂಳಿ ಹುಬ್ಬಳ್ಳಿ ಸಾಗುವ ಮಾರ್ಗ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ಸುಂಕಸಾಳಾ ಬಳಿ ಹೆದ್ದಾರಿಯಲ್ಲಿ ಬಿದ್ದ ಗುಂಡಿಗಳನ್ನು ತುಂಬಿ ಇಲ್ಲಿಯ ಕೆಲ ಪ್ರಮುಖರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿರಂತರ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸವಾರರು ರಸ್ತೆಯಲ್ಲಿ ಬಿದ್ದ ಗುಂಡಿ ಕಾಣದೆ ಈ ಗುಂಡಿಗಳಲ್ಲಿ ತಮ್ಮ ವಾಹನ ಬಿದ್ದು 20ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದವು. ಇದು ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿತ್ತು.ಈ ವಿಚಾರ ಟಿಪ್ಪರ್ ಲಾರಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲೆಮನೆಯವರಿಗೆ ತಿಳಿದು ಎಲ್ಲರೂ ಸೇರಿ ಈ ಗುಂಡಿ ಮುಚ್ಚಿ ಅಪಘಾತ ಆಗುವುದನ್ನು ತಡೆದು ಪ್ರಯಾಣಿಕರ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಬೇಕಾಗಿರುವ ಕೆಲಸವನ್ನು ಇವರು ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಜಲ್ಲಿ, ಎಂ ಸ್ಯಾಂಡ್, ಮತ್ತಿತರ ವಸ್ತುಗಳಿಂದ ಗುಂಡಿ ಮುಚ್ಚಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಗಣಪತಿ ನಾಯಕ ಮೂಲೆಮನೆ, ಪೊಲೀಸ್ ಸಿಬ್ಬಂದಿಗಳಾದ ಮಾರುತಿ, ಸಂತೋಷ, ಹವಾಲ್ದಾರ, ಗಣಪತಿ ಎ ಎಸೈ, ನಾಸಿರ ಸಯ್ಯದ, ಕೈತಾನ ರೆಬೆಲೋ, ರವಿ ನಾಯ್ಕ, ಪ್ರವೀಣ್ ನಾಯ್ಕ, ಪ್ರಸನ್ನ ನಾಯ್ಕ, ಮಾಲ್ವಿನ್ ರೆಬೆಲೋ, ಸಂಜು ಸುಂಕಸಾಳ, ಗೌರೀಶ ನಾಯ್ಕ ಇದ್ದರು.
ನಾವು ವಾಹನಗಳ ಮಾಲಕರು ಆಗಿರುವುದರಿಂದ ನಮಗೆ ವಾಹನ ದ ಪರಿಸ್ಥಿತಿ ಗೊತ್ತಿದೆ. ಒಂದು ಕುಟುಂಬ ಒಂದು ವ್ಯಕ್ತಿಯ ಅವಲಂಬನೆಯ ಮೇಲೆ ಇರುತ್ತದೆ. ಇಂತಹ ಗುಂಡಿಗಳಿಂದ ಅಪಘಾತ ಸಂಭವಿಸಿ ಆ ಕುಟುಂಬಕ್ಕೆ ಯಾರು ಇಲ್ಲದಂತಾಗುತ್ತದೆ. ಪ್ರತಿಯೊಬ್ಬರೂ ಇಂತಹ ಕಾರ್ಯಮಾಡಿ. ಪುಣ್ಯ ಕಟ್ಟಿಕೊಳ್ಳಿ.–ಗಣಪತಿ ನಾಯಕ ಮೂಲೆಮನೆ.