ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ,ಸರ್ಕಾರ ಇಲ್ಲದಿದ್ದರು ಕಾರ್ಯಕರ್ತರು ಗೆಲುವಿಗೆ ಶ್ರಮ ಪಟ್ಟಿದ್ದಾರೆ.ಅವರಿಗೆ ತೊಂದರೆ ಆದಾಗ ರಕ್ಷಣೆ ಅಗತ್ಯ. ನಮ್ಮ ಸರ್ಕಾರ ಅಧಿಕಾರದಿಲ್ಲದಿರುವುದರಿಂದ ನಮ್ಮ ಕಾರ್ಯಕರ್ತರ ಮೇಲೆ ಇಲ್ಲಿನ ಸಚಿವರು ಸುಳ್ಳು ದೂರು ದಾಖಲಿಸುವ ಕೆಲಸ ಮಾಡಿದ್ದಾರೆ. ಮನೆಯಲ್ಲಿರುವ ಮಹಿಳೆಯ ಮೇಲು 307 ಕೇಸ್ ದಾಖಲಿಸುವ ಕೆಲಸ ಆಗಿದೆ. ಕಳೆದೊಂದು ವರ್ಷದಿಂದ ನಿರಂತರ ಇಂತಹ ಪ್ರಕರಣ ನಡೆಯುತ್ತಿದೆ. ಸೂಕ್ಷ್ಮತೆಯಿಂದ ಗಮನಿಸಿ ಮುಂದಿನ ಬಾರಿ ಬರುವುದು ನಾವೇ ಗೆಲ್ಲುವುದು ಶತಸಿದ್ಧ. ಆಗ ಕರ್ಮ ರಿಟರ್ನ್ ಆಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ,ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಆಸ್ತಿ,ಅವರ ಪರಿಶ್ರಮ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ, ಅಭಿವೃದ್ಧಿ ಕಾರ್ಯಕ್ರಮಗಳು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ ಎಂದರು. ನಮ್ಮನ್ನು ಗೆಲ್ಲಿಸಲು ಶ್ರಮಿಸುವ ಕಾರ್ಯಕರ್ತರನ್ನು ಎಂದು ಕೈಬಿಡಬಾರದು. ಅವರನ್ನು ರಕ್ಷಣೆ ಮಾಡುವುದು ನಮ್ಮ ಹೊಣೆ ಎಂದರು.ಜಿಲ್ಲೆಯ ರೈಲ್ವೆ,ರಾಷ್ಟ್ರೀಯ ಹೆದ್ದಾರಿ ಇತರ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ಎಂದರು.
ಮಾಜಿ ಶಾಸಕ ಶಿವಾನಂದ ನಾಯ್ಕ ಮಾತನಾಡಿ, ಮೋದಿಯವರು ಜಿಲ್ಲೆಗೆ ಬಂದು ಹೋದ ಮೇಲೆ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಯಿತು. ನಿರೀಕ್ಷೆಗೂ ಮೀರಿ ಜಯಸಾಧಿಸಿದ್ದೇವೆ. ಕಾರ್ಯಕರ್ತರ ಶ್ರಮ, ಕಾಗೇರಿಯವರ ನಾಯಕತ್ವ ಸರಳ,ಸಜ್ಜನಿಕೆ ಜನರು ಒಪ್ಪಿಕೊಂಡರು. ಮುಂಬರುವ ಸ್ಥಳೀಯ ಚುನಾವಣೆ ಗೆಲ್ಲಲು ಚಟುವಟಿಕೆ ನಡೆಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಮುಂದಿನ ದಿನಗಳಲ್ಲಿ ಕಾಗೇರಿಯವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿ ಎಂದು ಹರಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ,ಮುಂಬರುವ ಚುನಾವಣೆಗಳನ್ನು ಸಹ ಸವಾಲಾಗಿ ಸ್ವೀಕರಿಸಿ ಎದುರಿಸೋಣ ಎಂದು ಕರೆನೀಡಿದರು.
ಅಭಿನಂದನೆ ಸ್ವೀಕರಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಜೆಡಿಎಸ್ -ಬಿಜೆಪಿ ಹಾಲು-ಸಕ್ಕರೆಯಂತೆ ಕೆಲಸ ಮಾಡಿದೆ. ಜಿಲ್ಲೆಯಲ್ಲಿ ಸರಿಸುಮಾರು ಶೇ.62ರಷ್ಟು ಮತ ಬಿಜೆಪಿ ಅಭ್ಯರ್ಥಿಗೆ ನೀಡಿದ್ದಾರೆ ಎಂದರೆ,ಮತದಾರ ಪ್ರಭುಗಳು ಬಿಜೆಪಿ ಮೇಲೆ ಎಷ್ಟು ಅಭಿಮಾನ ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ.ಮುಸ್ಲಿಂ,ಕ್ರಿಶ್ಚಿಯನ್ನರು ಕಾಂಗ್ರೆಸ್ ನ ಷಡ್ಯಂತ್ರಕ್ಕೆ ಬಲಿಯಾಗಿ ಒನ್ ಸೈಡೆಡ್ ವೋಟಿಂಗ್ ನಡೆಸುವ ಮನಸ್ಥಿತಿ ಬದಲಾಯಿಸಿಕೊಂಡು ರಾಷ್ಟ್ರದ ಮುಖ್ಯವಾಹಿನಿಗೆ ಇರಲು ಬಯಸಬೇಕು ಎಂದರು.ಒಳಹೊಡೆತದ ನೋಟಾ ಚಲಾಯಿಸಲು ಸಂದೇಶ ನೀಡಿದರು ಸಹ ನೋಟಾ ಕಡಿಮೆಯಾಗಿದೆ.ಇದು ಮೋದಿಯವರ ಅಭಿಮಾನಕ್ಕೆ ಸಾಕ್ಷಿಯಾಗಿದೆ. 3ಲಕ್ಷಕ್ಕೂ ಅಧಿಕ ಅಂತರದ ಮತ ನೀಡಿ ನನ್ನ ಮೇಲೆ ಸಾವಿರಪಟ್ಟು ಜವಾಬ್ದಾರಿ ಹೆಚ್ಚಿಸಿದ್ದಾರೆ.ಮೋದಿಯವರು ವಿಕಸಿತ ಭಾರತಕ್ಕಾಗಿ ಸಂಕಲ್ಪಿಸಿದಂತೆ ದುಡಿಯುತ್ತಾರೆ. ಅಭಿವೃದ್ಧಿ ಕೆಲಸಗಳ ಸರಮಾಲೆಯೆ ಮುಂದೆ ಇದೆ.ಅವರು ನೀಡುವ ಯೋಜನೆ ನಮ್ಮ ಕ್ಷೇತ್ರಕ್ಕೆ ಬರುವಂತೆ ಮಾಡೋಣ ಎಂದು ಭರವಸೆ ನೀಡಿದರು. ಜನತೆಯ ವಿಶ್ವಾಸಕ್ಕೆ ತಕ್ಕಂತೆ ಆಡಳಿತ ನೀಡೋಣ. ಅರಣ್ಯ ಭೂಮಿಯಲ್ಲಿ ವಾಸಿಸುವರಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಜಿಲ್ಲೆಯ ದೂರವಾಣಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿಯು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದರು. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದರೆ ಇಂದು ರಾಜ್ಯದಲ್ಲಿ ನಾವು ಅಧಿಕಾರದಲ್ಲಿರುತ್ತಿದ್ದೆವು.ಈ ಮೈತ್ರಿ ಹೀಗೆ ಮುಂದುವರೆಸಿಕೊಂಡು ಹೋಗೋಣ. ಈ ಮೈತ್ರಿ ಮಧ್ಯೆ ಬಿರುಕು ಮೂಡಿಸುವ ಮಾತುಕೇಳಬಂದರೆ ನಮ್ಮ ಗಮನಕ್ಕೆ ತನ್ನಿ,ಇಬ್ಬರ ನಡುವೆ ವಿಶ್ವಾಸದ ಕೊರತೆ ಆಗಬಾರದೆಂದರು.ಗುಂಡಬಾಳ ನೆರೆಪೀಡಿತ ಪ್ರದೇಶದ ಕಾಳಜಿಕೇಂದ್ರಕ್ಕೆ ಭೇಟಿ ನೀಡಿದಾಗ ನೆರೆಸಂತ್ರಸ್ಥರು ಎಸಿಯವರ ಬಳಿ ಜನರೇಟರ್ ಬಗ್ಗೆ ಕೇಳಿದಾಗ,ಕ್ಯಾಂಡಲ್ ನೀಡುತ್ತೇನೆ ಎಂದು ಸ್ಪಂದಿಸಬೇಕಾದ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುವುದು ಸರಿಯಾದ ಕ್ರಮವಲ್ಲ.ಕಾನೂನು ಎಲ್ಲರಿಗೂ ಒಂದೇ ಮಾನವೀಯತೆಯಿಂದ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದರು.ನಿಮ್ಮೆಲ್ಲರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಲೋಕಸಭಾ ಚುನಾವಣೆ ಉಸ್ತುವಾರಿ ಗೋವಿಂದ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ವೆಂಕಟೇಶ ನಾಯ್ಕ,ಉಮೇಶ್ ನಾಯ್ಕ,ಎಮ್.ಜಿ.ನಾಯ್ಕ,ರಾಜು ಬಂಢಾರಿ, ವಿನೋದ್ ನಾಯ್ಕ, ರಾಯಲ್ ಕೇರಿ, ಹೇಮಂತ್ ಗಾಂವ್ಕರ್ ,ಜಿಜಿ ಶಂಕರ್,ಎಮ್. ಜಿ. ಭಟ್ಟ,ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ,ಟಿಟಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣಪತಿ ಗೌಡ ನಿರ್ವಹಿಸಿದರು.ಯೋಗೇಶ್ ಮೇಸ್ತ ವಂದಿಸಿದರು.