ಶಿರಸಿ: ಕೆಡಿಸಿಸಿ ಬ್ಯಾಂಕ್ ರೈತರಿಗೆ ಕಾಮಧೇನುವಿದ್ದಂತೆ. ಬ್ಯಾಂಕ್‌ಗೆ ಮೋಸ ಮಾಡಿದರೆ, ನಿಮಗೆ ನೀವು ಮೋಸ ಮಾಡಿಕೊಂಡಂತೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.
ಅವರು ಮಂಗಳವಾರ ದಾಸನಕೊಪ್ಪದಲ್ಲಿ ಕೆಡಿಸಿಸಿ ಬ್ಯಾಂಕ್‌ನ 57ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ರೈತರ ಬೆವರು, ಆಡಳಿತ ಮಂಡಳಿ, ಸಿಬ್ಬಂದಿಗಳ ಕಠಿಣ ಪರಿಶ್ರಮದ ಫಲವಾಗಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಉನ್ನತ ಸ್ಥಾನಕ್ಕೇರಿದೆ ಎಂದರು. ಇಲ್ಲಿನ ರೈತರಿಗೆ ಅನುಕೂಲವಾಗಲೆಂದು ಇಲ್ಲೊಂದು ಶಾಖೆ ತೆರೆಯಬೇಕೆಂಬ ಆಗ್ರಹ,ಒತ್ತಾಸೆ ಇಂದು ನೆರವೇರಿದೆ. ಜುಲೈ ತಿಂಗಳೊಳಗಾಗಿ 75 ಶಾಖೆಯನ್ನು ತೆರೆಯಬೇಕೆಂಬ ಗುರಿಯನ್ನು ಹೊಂದಿದ್ದು, ಅದರಂತೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರ ಬ್ಯಾಂಕ್‌ಗಳಲ್ಲ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳು ರೈತರ ಅನುಕೂಲವನ್ನು ಗುರಿಯಾಗಿಸಿಕೊಂಡು ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದೆ. 104 ವರ್ಷಗಳ ಇತಿಹಾಸ ಹೊಂದಿದ ಕೆಡಿಸಿಸಿ ಶೂನ್ಯ ಬಡ್ಡಿದರದಲ್ಲಿ ಒಂದು ಸಾವಿರ ಕೋಟಿ, ಹಾಗೂ ಶೇ.3 ಬಡ್ಡಿದರದಲ್ಲಿ 500 ಕೋಟಿ ರೂ. ಸಾಲ ನೀಡಿ, ಆರ್ಥಿಕವಾಗಿ ಸಬಲವಾಗಿದ್ದು, ಕೃಷಿಕರ ಜೊತೆ ಕೃಷಿಯೇತರರ ವಿಶ್ವಾಸವನ್ನೂ ಗಳಿಸಿದೆ ಎಂದರು. ಸರಕಾರದ ಸಹಾಯಧನವಿಲ್ಲದೇ, ರೈತರಿಗೆ ಆರ್ಥಿಕ ನೆರವು ನೀಡುತ್ತಿದ್ದು,ನೀಡಿದ ಸಾಲದಲ್ಲಿ ಶೇ.99.21ರಷ್ಟು ವಸೂಲಾತಿಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಹಾವೇರಿ ಜಿಲ್ಲೆಯಲ್ಲಿ ಸಹಕಾರಿ ಸಂಘಗಳಿಲ್ಲ. ರೈತರು ಮೀಟರ್ ಬಡ್ಡಿದರದಲ್ಲಿ ಸಾಲ ಪಡೆದು ಕೃಷಿ ನಡೆಸುತ್ತಿದ್ದಾರೆ. ಕೆಡಿಸಿಸಿ ಬ್ಯಾಂಕ್ ಹಾವೇರಿ ರೈತರಿಗೂ ಸಾಲ ನೀಡಿ ಸಹಕರಿಸುತ್ತಿದೆ. ರೈತರು ಪಡೆದ ಸಾಲವನ್ನು ಕಾಲ ಕಾಲಕ್ಕೆ ಮರುಪಾವತಿಸಿ ಬ್ಯಾಂಕ್ ವ್ಯವಹಾರದಲ್ಲಿ ಸಹಕರಿಸಿ ಎಂದರು.
ಈ ವೇಳೆ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ್‌ದಾಸ್ ನಾಯಕ್, ನಿರ್ದೇಶಕ ರಾಮಕೃಷ್ಣ ಹೆಗಡೆ ಕಡವೆ, ಎಲ್.ಟಿ.ಪಾಟೀಲ್, ಪ್ರಮೋದ ಧವಳೆ,ವ್ಯವಸ್ಥಾಪಕ ಶ್ರೀಕಾಂತ ಭಟ್, ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜಶೇಖರ್ ಗೌಡರ್, ಪ್ರಮುಖರಾದ ಸಿ.ಎಫ್.ನಾಯ್ಕ್, ಬಸವರಾಜ ದೊಡ್ಮನಿ ಮುಂತಾದವರಿದ್ದರು. ದ್ಯಾಮಣ್ಣ ದೊಡ್ಮನಿ ಪ್ರಾಸ್ತಾವಿಕ ಮಾತನಾಡಿದರು.