ಕಾರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಕಡಿಯಾ ಗ್ರಾಮದ ರೈತರಾದ ಉಲ್ಲಾಸ ನಾಯ್ಕ ಅವರ ಕೃಷಿ ಜಮೀನಿನಲ್ಲಿ ಶನಿವಾರದಂದು ಕೃಷಿ ಭತ್ತ ನಾಟಿ ಯಂತ್ರಶ್ರೀ ಕಾರ್ಯಕ್ರಮ ನಡೆಯಿತು.
ಇವತ್ತು ಭತ್ತ ಬೇಸಾಯ ಹಳ್ಳಿ ಹಳ್ಳಿಗಳಿಂದ ವಿದಾಯ ಪಡೆಯುತ್ತಿದೆ. ಭೂಮಿ ಹಡಿಲು ಬೀಳುತ್ತಿದೆ. ಒಂದೆಡೆ ಬೆಳೆದ ಬೆಳೆಗೆ ಸರಿಯಾದ ಧಾರಣೆ ಸಿಗದೇ ಇರುವುದು, ಇನ್ನೊಂದೆಡೆ ಕೃಷಿ ಕಾರ್ಮಿಕರ ಕೊರತೆ ಮತ್ತು ದುಬಾರಿಯಾದ ವೇತನದಿಂದ ರೈತ ಭತ್ತ ಬೇಸಾಯವನ್ನು ಒಲ್ಲದ ಮನಸ್ಸಿನಿಂದ ಬಿಟ್ಟು ಬಿಡುವ ಹಂತಕ್ಕೆ ಬಂದಿದ್ದಾನೆ. ವರ್ಷದಿಂದ ವರ್ಷಕ್ಕೆ ಕರಾವಳಿಯ ಅನ್ನದ ಬಟ್ಟಲುಗಳು ಬರಿದಾಗುತ್ತಿವೆ. ಸಾಂಪ್ರಾದಾಯಿಕ ಕೃಷಿ ಪದ್ದತಿ ನೆನಪಿನ ಪುಟ ಹಿಡಿದಿದೆ. ಈ ನೆಲದ ಕೃಷಿ ಸಂಸ್ಕೃತಿಯಾಗಿರುವ ಭತ್ತ ಬೇಸಾಯವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಫಲಿತಾಂಶ ಮಾತ್ರ ನಿರೀಕ್ಷಿತ ಹಂತಕ್ಕೆ ಸಿಗುತ್ತಿಲ್ಲ.
ಭತ್ತ ಬೇಸಾಯವನ್ನು ಲಾಭದಾಯಕವಾಗಿ ಮಾಡಲು ಸಾಧ್ಯವಿದೆ. ಯಾಂತ್ರೀಕೃತ ಕೃಷಿ ಪದ್ಧತಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಬೆರಳೆಣಿಕೆ ಕೃಷಿ ಕಾರ್ಮಿಕರ ಮೂಲಕ ಉತ್ತಮ ಭತ್ತ ಬೇಸಾಯ ಮಾಡಲು ಸಾಧ್ಯ ಎನ್ನುವ ಸಿದ್ದಾಂತದೊಂದಿಗೆ ಯಂತ್ರಶ್ರೀ ಎನ್ನುವ ಹೊಸ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟಸ್ಟ್ ಅವರು ಕಾರ್ಯರೂಪಕ್ಕೆ ತಂದಿದ್ದಾರೆ.
ಈಗಾಗಲೇ ಭತ್ತದ ಬೇಸಾಯಕ್ಕೆ ರೂಪುಗೊಳಿಸಲಾಗಿರುವ ಯಂತ್ರಗಳ ಸಮರ್ಪಕ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಳ್ಳುವುದೇ ಈ ಯಂತ್ರಶ್ರೀಯ ಮೂಲ ಉದ್ದೇಶ. ಇವತ್ತು ಗದ್ದೆ ಉಳುಮೆ, ನಾಟಿ, ಕಳೆ ನಿರ್ವಹಣೆ, ಕೊಲ್ಲು ಮತ್ತು ಒಕ್ಕಣೆ ಕೆಲಸಗಳಿಗೆ ಯಂತ್ರಗಳನ್ನೇ ಉಪಯೋಗಿಸಿಕೊಳ್ಳಬಹುದಾಗಿದೆ. ಈ ಎಲ್ಲ ಕೆಲಸಗಳಿಗೆ ಕಾರ್ಮಿಕರನ್ನು ಅವಲಂಬಿಸುವುದು ತಪ್ಪುತ್ತದೆ. ಕ್ರಮಬದ್ಧವಾಗಿ ಮಾಡಿದರೆ ಯಾಂತ್ರೀಕೃತ ಕೃಷಿ ಲಾಭದಾಯಕವಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಕೇರವಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಉಪಾಧ್ಯಕ್ಷೆ ದೀಪಾ ನಾಯ್ಕ ಸದಸ್ಯರಾದ ಬಾಲಚಂದ್ರ ಕಾಮತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟಸ್ಟ್ ಯೋಜನೆಯ ತಾಲೂಕು ಅಧಿಕಾರಿ ಭಾಸ್ಕರ, ರೈತರಾದ ಉಲ್ಲಾಸ ನಾಯ್ಕ, ಪ್ರಭಾಕರ ಸಾವಂತ್, ಗೋವಿಂದ ಮೇತ್ರಿ, ಗಣಪತಿ ನಾಯ್ಕ, ಸಂತೋಷ ನಾಯ್ಕ, ಮುರಳೀಧರ ನಾಯ್ಕ, ರಮೇಶ್ ನಾಯ್ಕ, ಗೋವಿಂದರಾಯ ನಾಯ್ಕ, ತೇಲು ಗೌಡ , ತುಕ್ಕು ಗೌಡ ಶಿರ್ವೆ, ಶಾಂತರಾಮ ಗೌಡ ಬೇಳೂರು ಪ್ರಜ್ವಲ್ ಶೇಟ್ ದೇವಳಮಕ್ಕಿ ಮತ್ತಿತರರು ಉಪಸ್ಥಿತರಿದ್ದರು.