ಸಿದ್ದಾಪರ: ತಾಲೂಕಿನ ಹಾರ್ಸಿಕಟ್ಟಾದಿಂದ ಹದಿನಾರನೇ ಮೈಲ್‌ಗಲ್‌ಗೆ ತೆರಳುವ ಮುಖ್ಯರಸ್ತೆಯ ಮಲ್ಕಾರ ಘಟ್ಟದ ಹತ್ತಿರ ರಸ್ತೆ ಪಕ್ಕದಲ್ಲಿ ಕಂದಕ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವುದರೊಂದಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಹಾರ್ಸಿಕಟ್ಟಾದಿಂದ ವಾಜಗದ್ದೆ ಮಾರ್ಗವಾಗಿ ಹದಿನಾರನೇ ಮೈಲಿಗಲ್ಲಿನಲ್ಲಿ ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಗೆ ಸಂಪರ್ಕ ನೀಡುವ ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನ ಸಂಚರಿಸುತ್ತದೆ. ಸಾರಿಗೆ ಬಸ್ ,ಹಾಲಿನ ವಾಹನವೂ ನಿತ್ಯ ಓಡಾಡುತ್ತದೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಓಡಾಡುವುದಲ್ಲದೇ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಜನತೆಗೆ ಶಿರಸಿ-ಸಿದ್ದಾಪುರ ತಾಲೂಕು ಕೇಂದ್ರಕ್ಕೆ ತೆರಳುವ ಪ್ರಮುಖ ಮುಖ್ಯ ರಸ್ತೆ ಇದಾಗಿದೆ.
ಮುಖ್ಯವಾಗಿ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಸಂಪಗೋಡು, ಭಂಡಾರಿಕೇರಿ, ಕೋಡ್ಸರ ಮುಠ್ಠಳ್ಳಿ ಗ್ರಾಮದ ಸಾರ್ವಜನಿಕರು ಬ್ಯಾಂಕ್, ಗ್ರಾಪಂ,ಸೇವಾ ಸಹಕಾರಿ ಸಂಘ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕಾಲೇಜುಗಳಿಗೆ, ಅಂಚೆ ಕಚೇರಿ, ಗ್ರಾಮ ಓನ್, ಹಾಲು ಸಂಘಗಳಿಗೆ ಬರಬೇಕೆಂದರೆ ಇದೇ ಮುಖ್ಯ ರಸ್ತೆ ಆಗಿದೆ. ಅಲ್ಲದೇ ಶಿರಸಿ-ಸಿದ್ದಾಪುರಕ್ಕೆ ತೆರಳುವ ಪ್ರಮುಖ ರಸ್ತೆ ಇದಾಗಿದೆ.
ಈ ಮಾರ್ಗದಲ್ಲಿ ನಾಲ್ಕೈದು ಕಡೆ ರಸ್ತೆಯ ಪಕ್ಕದಲ್ಲಿ ಭಾರಿ ಕಂದಕ ಬಿದ್ದು ವಾಹನ ಸವಾರರಿಗೆ ಸವಾಲು ಉಂಟಾಗಿರುವುದರಿಂದ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಕಂದಕ ಬಿದ್ದಲ್ಲಿ ಮಣ್ಣು ತುಂಬಿ ತಾತ್ಕಾಲಿಕವಾಗಿ ಬೇಲಿ ನಿರ್ಮಿಸಿದೆ.ಇದರಿಂದ ಡಾಂಬರು ರಸ್ತೆಯ ಅರ್ಧಭಾಗ ಮಣ್ಣಿನ ದಿಂಬದಿಂದ ಕೂಡಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಈ ರಸ್ತೆಯ ಮಾಣಿಕ್ನಮನೆಗೆ ತೆರಳುವ ಕ್ರಾಸ್‌ನ ರಸ್ತೆಯ ಮುಂದೆ ಭಾರೀ ಕಂದಕ ಬಿದ್ದಿದ್ದಲ್ಲದೇ ಇನ್ನೆನು ಒಂದೆರಡು ಅಡಿಯಷ್ಟು ರಸ್ತೆ ಕುಸಿದರೆ ಅಪಾಯ ಸಂಭವಿಸುವುದಲ್ಲದೇ ಇರುವ ಪ್ರಮುಖ ಸಂಪರ್ಕ ರಸ್ತೆ ಕಡಿತಗೊಳ್ಳುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ. ಸುರಿಯುತ್ತಿರುವ ಮಳೆಗೆ ರಸ್ತೆ ಕಡಿತಗೊಂಡರೆ ಸಾರ್ವಜನಿಕರು ಸಂಚಾರಕ್ಕೆ ಸಂಕಟಪಡುವಂತಾಗುತ್ತದೆ.
-ಹದಿನಾರನೇ ಮೈಲಿಗಲ್‌ನಿಂದ ಹಾರ್ಸಿಕಟ್ಟಾದವರೆಗೆ 8ಕಿ.ಮೀ. ಇದ್ದು ಇದರ ನಡುವೆ ನಾಲ್ಕೈದು ಕಡೆ ಕಂದಕ ಬಿದ್ದಿರುವುದರಿಂದ ಎಲ್ಲ ಕಡೆಯೂ ಇಲಾಖೆ ಬೇಲಿ ನಿರ್ಮಿಸಿದೆ. ಆದರೆ ಮಳೆಗಾಲದಲ್ಲಿ ಚರಂಡಿಗಳಲ್ಲಿ ಹರಿಯುವ ನೀರಿನ ರಭಸಕ್ಕೆ ಮತ್ತಷ್ಟು ಕಂದಕ ಬೀಳುವುದಲ್ಲದೇ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಶಾಶ್ವತವಾಗಿ ತಡೆಗೋಡೆ ನಿರ್ಮಿಸುವಂತೆ ಹಾಗೂ ತಾತ್ಕಾಲಿಕವಾಗಿಯೂ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕೆಂದು ವಾಜಗದ್ದೆ, ಕೋಡ್ಸರ ಮುಠ್ಠಳ್ಳಿ, ಹಲಸಗಾರ, ಹೊಸಗದ್ದೆ, ಕಂಚಿಮನೆ ಮತ್ತಿತರ ಊರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಮಲ್ಕಾರ ಘಟ್ಟದ ರಸ್ತೆಯ ಪಕ್ಕ ಕಂದಕ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುನ್ನೆಚ್ಚರಿಕೆಯಾಗಿ ಬೇಲಿ ಕಟ್ಟಲಾಗಿದೆ. ಕಂದಕ ತುಂಬಿ ರಸ್ತೆ ತುರ್ತು ನಿರ್ವಹಣೆಗಾಗಿ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಹಾಗೂ ಇಲಾಖೆಯ ಮೇಲಾಧಿಕಾರಿಗಳಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.