21 ರೂಪಾಯಿಯೊಂದಿಗೆ ಮನೆ ಬಿಟ್ಟಿದ್ದ ಉತ್ತರ ಕನ್ನಡದ ಎಸ್.ರಘು | ಇಂದು ಭಾರತದ ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲಿ ಒಬ್ಬ..!
ಹಣೆಯಲ್ಲಿ ಕುಂಕುಮ, ಸಾಧಾರಣ ವ್ಯಕ್ತಿಯಂತೆ ಕಾಣುವ ಈ ವ್ಯಕ್ತಿ, ನಮ್ಮ ಕನ್ನಡ ನಾಡಿನ ಅಸಮಾನ್ಯ ಪ್ರತಿಭೆ. ಆ ಹುಡುಗ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡವ. ಕೈ ಮುರಿಯಿತು, ಕ್ರಿಕೆಟ್ ಕನಸು ಕಮರಿತು. ಆದರೂ ಛಲ ಬಿಡದೇ, ಕಳೆದುಕೊಂಡದ್ದನ್ನು ಮತ್ತೆ ಹುಡುಕಲು ಹೊರಟವನು. ಇಂದು ಭಾರತದ ಟಿ20 ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲೊಬ್ಬನಾಗಿ ನಿಂತಿದ್ದಾನೆ.
ಸುಮಾರು 24 ವರ್ಷಗಳ ಹಿಂದೆ, ಕ್ರಿಕೆಟ್ ಆಡಲೆಂದು ಕೇವಲ 21 ರೂಪಾಯಿಗಳೊಂದಿಗೆ ಮನೆ ಬಿಟ್ಟಿದ್ದ ಹುಡುಗ. ಆ ಪ್ರಯಾಣ ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವವರೆಗೆ ಬಂದು ತಲುಪಿದೆ ಎಂದರೆ ಇದು ಅದ್ಭುತವಲ್ಲದೆ ಮತ್ತಿನ್ನೇನು..! 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಒಂದು ಮಾತು ಹೇಳಿದ್ದರು. ‘’ನನ್ನ ಇವತ್ತಿನ ಯಶಸ್ಸಿನಲ್ಲಿ ಆ ವ್ಯಕ್ತಿಯ ಪಾತ್ರ ತುಂಬಾ ದೊಡ್ಡದು. ಆದರೆ ಅವರ ಪರಿಶ್ರಮ ಕೆಲವೊಮ್ಮೆ ಜಗತ್ತಿನ ಕಣ್ಣಿಗೆ ಕಾಣುವುದೇ ಇಲ್ಲ’’ ಎಂದು. ಹೌದು.. ಆ ವ್ಯಕ್ತಿ ಇರುವುದೇ ಹಾಗೆ. ಆತ ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು. ಹೀಗಾಗಿ ಜಗತ್ತಿನ ಕಣ್ಣಿಗೆ ಕಾಣಿಸದೆ ಸದಾ ಆಟಗಾರರ ಬೆನ್ನ ಹಿಂದೆಯೇ ನಿಂತಿರುತ್ತಾನೆ. ಆತ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಎಸ್.ರಘು ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು ಎಂದು ಕರೆಯಲು ಕಾರಣವಿದೆ. ಕಳೆದ 13 ವರ್ಷಗಳಲ್ಲಿ ಭಾರತ ತಂಡಕ್ಕಾಗಿ ರಕ್ತವನ್ನೇ ಬಸಿದವರು ಯಾರಾದರೂ ಇದ್ದರೆ ಅದು ರಘು. 2011ರಲ್ಲಿ ಭಾರತ ತಂಡಕ್ಕೆ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸೇರಿಕೊಂಡ ರಘು, ಕಳೆದೊಂದು ದಶಕದಲ್ಲಿ ಭಾರತ ತಂಡದ ಅಭ್ಯಾಸದ ವೇಳೆ ಕನಿಷ್ಠ 10 ಲಕ್ಷ ಚೆಂಡುಗಳನ್ನು ಎಸೆದಿರಬಹುದು. ರಾಘವೇಂದ್ರನ ರಟ್ಟೆಯ ಬಲದಿಂದ ನುಗ್ಗಿ ಬರುವ ಆ ಎಸೆತಗಳನ್ನು ಎದುರಿಸಲು ಸಾಧಾರಣ ಧೈರ್ಯ ಸಾಲದು. 150 kph ವೇಗದಲ್ಲಿ ಬಂದಪ್ಪಳಿಸುವ ಮಿಂಚಿನ ವೇಗದ ಚೆಂಡುಗಳವು. ಸೈಡ್ ಆರ್ಮ್ ಎಂಬ ಸಾಧನ ರಘು ಕೈಯಲ್ಲಿದ್ದಾಗ ಇವನಷ್ಟು ವೇಗದಲ್ಲಿ ಚೆಂಡೆಸೆಯುವ ಮತ್ತೊಬ್ಬ ಥ್ರೋಡೌನ್ ಸ್ಪೆಷಲಿಸ್ಟ್ ಜಗತ್ತಿನಲ್ಲೇ ಇಲ್ಲ.
ತಲೆಯ ಎತ್ತರಕ್ಕೆ ಪುಟಿದೆದ್ದು ಬರುವ ಎಸೆತಗಳನ್ನು ರೋಹಿತ್ ಶರ್ಮಾ ಲೀಲಾಜಾಲವಾಗಿ ಸಿಕ್ಸರ್’ಗಟ್ಟುವುದನ್ನು ನೋಡಿ ಜನ ‘ವಾಹ್, ಹೀ ಈಸ್ ಸ್ಪೆಷಲ್’ ಎನ್ನುತ್ತಾರೆ. ಭಯಾನಕ ಬೌನ್ಸರ್’ಗಳಿಗೆ, ಶರವೇಗದ ಚೆಂಡುಗಳಿಗೆ ವಿರಾಟ್ ಕೊಹ್ಲಿ ಬಾರಿಸುವ ಒಂದೊಂದು ಹೊಡೆತಗಳಿಗೆ ಜನ ‘ಉಘೇ, ಉಘೇ’ ಎನ್ನುತ್ತಾರೆ. ಅನುಮಾನವೇ ಬೇಡ, ಅದು ವಿರಾಟ್, ರೋಹಿತ್’ರಂತಹ ಆಟಗಾರರ ಶಕ್ತಿ ಮತ್ತು ತಾಕತ್ತು. ಆ ಶಕ್ತಿ-ತಾಕತ್ತಿಗೆ ಪರಿಪೂರ್ಣತೆ ತಂದುಕೊಟ್ಟವನು ನಮ್ಮ ಕನ್ನಡಿಗ ರಾಘವೇಂದ್ರ. ‘’ನೆಟ್ಸ್’ನಲ್ಲಿ 150 kph ವೇಗದಲ್ಲಿ ರಘು ಎಸೆಯುವ ಚೆಂಡುಗಳನ್ನು ಎದುರಿಸಿ ಪಳಗಿರುವ ನಮಗೆ, ಮ್ಯಾಚ್’ನಲ್ಲಿ ಭಯಾನಕ ವೇಗಿಗಳೇ ಮಧ್ಯಮ ವೇಗಿಗಳಂತೆ ಕಾಣುತ್ತಾರೆ’’ ಎಂದು ಸ್ವತಃ ವಿರಾಟ್ ಕೊಹ್ಲಿ ಹಿಂದೊಮ್ಮೆ ಹೇಳಿದ್ದರು.
ನಮ್ಮ ಬದುಕಿಗೆ ರಾಘವೇಂದ್ರನ ಕಥೆ ಸ್ಫೂರ್ತಿಯಾಗಲಿ:
ರಾಘವೇಂದ್ರನಿಗೆ ವಿಪರೀತ ಕ್ರಿಕೆಟ್ ಹುಚ್ಚು. ತಂದೆಗೆ ಕ್ರಿಕೆಟ್ ಎಂದರೆ ಅಲರ್ಜಿ. ಇವನ ಕ್ರಿಕೆಟ್ ಹುಚ್ಚನ್ನು ನೋಡಿದ ತಂದೆ ಒಂದು ದಿನ ಮಗನಲ್ಲಿ ಕೇಳುತ್ತಾರೆ. ‘’ನಿನಗೆ ಓದು, ಜೀವನ ಮುಖ್ಯವೋ, ಕ್ರಿಕೆಟ್ ಮುಖ್ಯವೋ’’ ಎಂದು. ಅಷ್ಟೇ.. ಕೈಯಲ್ಲೊಂದು ಬ್ಯಾಗ್, ಪಾಕೆಟ್’ನಲ್ಲಿ 21 ರೂಪಾಯಿ.. ಮನೆ ಬಿಟ್ಟು ಹೊರಟೇ ಬಿಟ್ಟ ರಾಘವೇಂದ್ರ.
ಕುಮಟಾದಿಂದ ಹೊರಟವನು ನೇರ ಬಂದು ಸೇರಿದ್ದು ಹುಬ್ಬಳ್ಳಿಗೆ. ಹಿಂದೆ ಮುಂದೆ ಯೋಚಿಸದೆ ಮನೆ ಬಿಟ್ಟು ಬಂದವ.. ಕೈಯಲ್ಲಿದ್ದದ್ದು ಕೇವಲ ₹21. ಒಂದು ವಾರ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಾನೆ. ಅಲ್ಲಿಂದ ಪೊಲೀಸರು ಓಡಿಸಿದಾಗ ಪಕ್ಕದಲ್ಲೇ ಇದ್ದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾನೆ. 10 ದಿನ ದೇವಸ್ಥಾನದಲ್ಲಿ ವಾಸ. ಅಲ್ಲಿಂದಲೂ ಹೊರ ನಡೆಯಬೇಕಾದ ಪರಿಸ್ಥಿತಿ ಎದುರಾದಾಗ ಬೇರೆ ದಾರಿ ಕಾಣದ ರಾಘವೇಂದ್ರ ಹತ್ತಿರದ ಸ್ಮಶಾನವೊಂದನ್ನು ಸೇರಿಕೊಳ್ಳುತ್ತಾನೆ. ಸ್ಮಶಾನದಲ್ಲಿದ್ದ ಪಾಳು ಬಿದ್ದ ಕಟ್ಟಡವೇ ಮನೆಯಾಗುತ್ತದೆ. ಕ್ರಿಕೆಟ್ ಮೈದಾನದಿಂದ ತಂದ ಹರಕಲು ಮ್ಯಾಟನ್ನೇ ಹೊದಿಕೆ ಮಾಡಿಕೊಳ್ಳುತ್ತಾನೆ. ಈ ರೀತಿ ನಾಲ್ಕೂವರೆ ವರ್ಷ ಸ್ಮಶಾನದಲ್ಲೇ ಮಲಗುತ್ತಾನೆ ರಾಘವೇಂದ್ರ. ಈ ಮಧ್ಯೆ ಬಲಗೈ ಮುರಿದು ಹೋಗಿದ್ದ ಕಾರಣ ಕ್ರಿಕೆಟ್ ಆಡುವ ಕನಸಿಗೆ ಕಲ್ಲು ಬಿದ್ದಿರುತ್ತದೆ. ಮನೆ ಬಿಟ್ಟು ಬಂದಾಗಿದೆ, ವಾಪಸ್ ಹೋಗುವ ಮಾತೇ ಇಲ್ಲ ಎಂದುಕೊಂಡವನೇ ಕ್ರಿಕೆಟ್ ಕೋಚಿಂಗ್ ಕಡೆ ಗಮನ ಹರಿಸುತ್ತಾನೆ.
ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ, ಅವರ ಅಭ್ಯಾಸಕ್ಕೆ ನೆರವಾಗುತ್ತಾ ಇದ್ದವನಿಗೆ ಗೆಳೆಯನೊಬ್ಬ ಬೆಂಗಳೂರು ದಾರಿ ತೋರಿಸುತ್ತಾನೆ. ಬೆಂಗಳೂರಿಗೆ ಬಂದ ರಾಘವೇಂದ್ರನಿಗೆ ಆಶ್ರಯ ಕೊಟ್ಟದ್ದು Karnataka Institute of Cricket. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡೆಸೆಯುವುದು, ಬೌಲಿಂಗ್ ಮಷಿನ್’ನಲ್ಲಿ ಅಭ್ಯಾಸ ಮಾಡಿಸುವುದು ರಾಘವೇಂದ್ರನ ಕೆಲಸವಾಗಿತ್ತು. ಹೀಗೇ ಒಂದು ದಿನ ಕರ್ನಾಟಕ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬೀಳುತ್ತಾನೆ. ರಾಘವೇಂದ್ರನ ಕೆಲಸವನ್ನು ನೋಡಿದ ತಿಲಕ್ ನಾಯ್ಡು, ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯಿಸುತ್ತಾರೆ.
ಅದು ರಾಘವೇಂದ್ರನ ಬದುಕಿಗೆ ಸಿಕ್ಕ ದೊಡ್ಡ ತಿರುವು. ಹುಡುಗನ ಪ್ರಾಮಾಣಿಕತೆಯನ್ನು ಗಮನಿಸಿದ ಶ್ರೀನಾಥ್, ‘ಕರ್ನಾಟಕ ರಣಜಿ ತಂಡದ ಜೊತೆ ಇದ್ದು ಬಿಡು’ ಎಂದು ಅಲ್ಲಿಗೆ ಕರೆ ತಂದು ಸೇರಿಸುತ್ತಾರೆ. ಕ್ರಿಕೆಟ್ ಸೀಸನ್’ನಲ್ಲಿ ಕರ್ನಾಟಕ ತಂಡದ ಜೊತೆ ಕೆಲಸ.. ಇಲ್ಲಿ ಕೆಲಸವಿಲ್ಲದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ National Cricket Academyಯಲ್ಲಿ ಕೆಲಸ. ನೆನಪಿರಲಿ.. ಈ ರೀತಿ 3-4 ವರ್ಷ ಒಂದು ಪೈಸೆ ದುಡ್ಡು ಪಡೆಯದೆ ಕೆಲಸ ಮಾಡಿದ್ದ ರಾಘವೇಂದ್ರ. ಕೈಯಲ್ಲಿ ದುಡ್ಡಿಲ್ಲದ ಕಾರಣ ಎಷ್ಟೋ ದಿನ ಊಟವಿಲ್ಲದೆ ರಾತ್ರಿ ಕಳೆದದ್ದೂ ಇದೆ.
NCAನಲ್ಲಿದ್ದಾಗ ಬಿಸಿಸಿಐ level-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸುತ್ತಾನೆ. NCAಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಅಭ್ಯಾಸ ಮಾಡಿಸುತ್ತಾ ಅವರ ನೆಚ್ಚಿನ ಹುಡುಗನಾಗಿ ಬಿಡುತ್ತಾನೆ. ರಾಘವೇಂದ್ರನ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸುತ್ತಾರೆ. ಪರಿಣಾಮ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾನೆ. ಕಳೆದ 13 ವರ್ಷಗಳಿಂದ ಭಾರತ ತಂಡದ ಜೊತೆ ಇರುವ ರಾಘವೇಂದ್ರ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾನೆ. ರಾಘವೇಂದ್ರನ ನಿರಂತರ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಪ್ರತಿಫಲ ಟಿ20 ವಿಶ್ವಕಪ್.
ಕೃಪೆ : ಮಮತಾ ಟಿಬಿ (ಫೇಸ್ಬುಕ್ ಬರಹ)