Slide
Slide
Slide
previous arrow
next arrow

ಹೊನ್ನಾವರ ಸಮಸ್ಯೆಗಳ ಆಗರ;ಕೆಡಿಪಿ ಸಭೆಯಲ್ಲಿ ಸಿಗಬೇಕಿದೆ ಪರಿಹಾರ

300x250 AD

ಹೊನ್ನಾವರ ಜನತೆಗೆ ಕನಸಾದ ಇಂದಿರಾ ಕ್ಯಾಂಟೀನ್ : ಸಚಿವರ ಕೆಡಿಪಿ ಸಭೆಯಲ್ಲಿ ಚಾಲನೆ ಸಿಗುವುದೇ…?

ಹೊನ್ನಾವರ: ತಾಲೂಕಿನಲ್ಲಿ ಸಮಸ್ಯೆಗಳಿಗೆ ಬರವಿಲ್ಲ, ಹುಡುಕಲು ಹೊರಟರೆ ಹಲವಾರು ಸಮಸ್ಯೆ ನಮ್ಮ ಕಣ್ಣ ಮುಂದೆ ಕಂಡುಬರುತ್ತದೆ. ಅದರಲ್ಲಿ ತೀರಾ ಅಗತ್ಯ ಇರುವ ಮೂಲಭೂತ ಸೌಕರ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯವಿದೆ. ಆ ನಿಟ್ಟಿನಲ್ಲಿ ಇಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಪರಿಹಾರದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ತಾಲೂಕು 26 ಗ್ರಾಮ ಪಂಚಾಯತ, 2 ಪಟ್ಟಣ ಪಂಚಾಯತ ಒಳಗೊಂಡಿದೆ. ಅಲ್ಲಲ್ಲಿ ಸಾರ್ವಜನಿಕರಿಗೆ ಅಗತ್ಯ ಇರುವ ಅನೇಕ ಕೆಲಸಗಳು ಆಗಬೇಕಿವೆ. ಕಂದಾಯ, ಅರಣ್ಯ, ಸಾರಿಗೆ, ಆರೋಗ್ಯ ಹೀಗೆ ಹಲವು ಇಲಾಖೆಯಿಂದ ಆಗಬೇಕಿರುವ ಕೆಲಸಗಳಿಗೆ ಆದಷ್ಟು ಬೇಗ ಮುಕ್ತಿ ಸಿಗಬೇಕಿದೆ. ಸದಾ ಜನಸಾಮಾನ್ಯರ ಪರವಾಗಿ ಕೆಲಸ ಮಾಡಿಕೊಂಡು ಬಂದಿರುವ ಮಂಕಾಳ್ ವೈದ್ಯರು ಸಚಿವರಾದ ಬಳಿಕ ಕರೆದಿರುವ ಎರಡನೇ ತ್ರೈಮಾಸಿಕ ಸಭೆ ಇದಾಗಿದೆ. 

ಹೊನ್ನಾವರ ಪಟ್ಟಣದಲ್ಲಿರುವ ಶೌಚಾಲಯಗಳು ಸಾಂಕ್ರಾಮಿಕ ರೋಗದ ಉತ್ಪತ್ತಿ ತಾಣದಂತಿದೆ. ಪಟ್ಟಣ ಪಂಚಾಯತ ಎದುರು ಇರುವ ಮೂತ್ರಖಾನೆ, ಕೋರ್ಟ್ ರಸ್ತೆಯ ಪ. ಪಂ. ಕಟ್ಟಡಕ್ಕೆ ಹೊಂದಿಕೊಂಡಿರುವ ಮೂತ್ರಖಾನೆ, ತಾ. ಪಂ. ಎದುರು ಇರುವ ಮೂತ್ರಖಾನೆ, ಮಾರ್ಕೆಟಿಂಗ್ ಸೊಸೈಟಿ ಎದುರು ಇರುವುದು, ಹೀಗೆ ಸಾಮಾನ್ಯವಾಗಿ ಪಟ್ಟಣದಲ್ಲಿರುವ ಬಹುತೇಕ ಮೂತ್ರಖಾನೆ ಇದೇ ಸ್ಥಿತಿಯಲ್ಲಿದೆ. ಪ. ಪಂ. ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬೆದ್ದು ಹೋಗಿದ್ದು, ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ. ಒಂದೊಮ್ಮೆ ಈ ಮೂತ್ರಖಾನೆಗಳು ಹಾಳಾಗಿದ್ದಲ್ಲಿ ಅದನ್ನು ತೆರವು ಗೊಳಿಸುವ ಕೆಲಸ ಆಗಬೇಕಿದೆ. ಸರಿ ಇದ್ದಲ್ಲಿ ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಬೇಕಿದೆ.

ಗ್ರಾಮೀಣ ಪ್ರದೇಶಕ್ಕೆ ಸಂಚಾರ ಮಾಡುತ್ತಿರುವ ಸಾರಿಗೆ ಬಸ್ಸು ಕೋವಿಡ್ ನಂತರ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿಲ್ಲ, ಆ ಎಲ್ಲಾ ಕಡೆ ಈ ಹಿಂದಿನಂತೆ ಬಸ್ಸು ಸಂಚಾರ ಮಾಡಬೇಕಿದೆ. ನೀರು ಸರಬರಾಜು ಮಾಡಲು ರಸ್ತೆ ಅಂಚಿನಲ್ಲಿ ಹೊಂಡ ತೆಗೆದು ಪೈಪ್ ಲೈನ್ ಮಾಡಲಾಗಿದ್ದು ಅಲ್ಲಲ್ಲಿ ಆರೆಬರೆ ಮಾಡಿ ಬಿಟ್ಟಿದ್ದು ಜನರ ಸಂಚಾರಕ್ಕೆ ಆತಂಕ ಉಂಟಾಗುತ್ತಿದೆ. ಅರಣ್ಯ ಇಲಾಖೆಗೆ ಸಂಬಂಧ ಪಟ್ಟಂತೆ ಅರಣ್ಯ ಪ್ರದೇಶದಲ್ಲಿ ಬೇಕಾಬಿಟ್ಟಿ ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದಾರೆ. ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಒಂದು ಮಾಡುತ್ತಿದ್ದಾರೆ ಎನ್ನುವ ಸಾರ್ವಜನಿಕರಿಂದ ದೂರು ಕೂಡ ಕೇಳಿ ಬರುತ್ತಿದೆ. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಮಾಶಾಸನಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಬಡವರಾಗಿದ್ದರು ಕೂಡ ಮಿತಿಮೀರಿ ಆದಾಯ ಹಾಕುತ್ತಿರುವುದು ಜನಸಾಮಾನ್ಯರು ತೊಂದರೆಗೆ ಒಳ ಪಡುತ್ತಿದ್ದಾರೆ. ಇನ್ನೂ ಸರ್ವರ್ ಸಮಸ್ಯೆ ಜನರನ್ನು ಕಾಡುತಿದ್ದು ಸರಕಾರ ಈ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಜನರಿಗೆ ಸೌಲಭ್ಯ ಸಿಗುವಂತ ಅವಕಾಶ ಮಾಡಿಕೊಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಸರಾಯಿ ವ್ಯಾಪಾರ ಮಿತಿ ಮೀರಿದ್ದು ಅದಕ್ಕೆ ಕಡಿವಾಣ ಬೀಳಬೇಕಿದೆ. ಇನ್ನೂ ಕೆಲವು ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದ್ದು ಜನ ಸಾಮಾನ್ಯರು ಹೈರಾಣ ಆಗುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಇಲಾಖೆ ಮುಖಾಂತರ ಜನರ ಕೆಲಸ ಆಗಬೇಕಿದೆ.

300x250 AD

ಇಂದಿರಾ ಕ್ಯಾಂಟೀನ್ : ಸಚಿವರ ಕೆಡಿಪಿ ಸಭೆಯಲ್ಲಿ ಚಾಲನೆ ಸಿಗುವುದೇ…?

ಹೊನ್ನಾವರ ಪಟ್ಟಣ ಪಂಚಾಯತದಲ್ಲಿ ಕಳೆದ ಐದು ವರ್ಷದಿಂದ ಧೂಳು ತಿನ್ನುತ್ತಿರುವ ಇಂದಿರಾ ಕ್ಯಾಂಟೀನ್ ಯಂತ್ರೋಪಕರಣ ಮತ್ತು ಇತರ ಸಾಮಗ್ರಿಗಳಿಗೆ ಇಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಮುಕ್ತಿ ಸಿಗಲಿ, ತಾಲೂಕಿನ ಬಡ ಜನತೆಗೆ ಇಂದಿರಾ ಕ್ಯಾಂಟೀನ್ ಭಾಗ್ಯ ದೊರೆಯಲಿ ಎಂದು ಜನತೆಯ ಆಶಯವಾಗಿದೆ.

ಕಳೆದ ಬಿಜೆಪಿ ಸರಕಾರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಪ್ರಯತ್ನ ಮಾಡಿಲ್ಲ. ಹೊನ್ನಾವರ ಎರಡು ಶಾಸಕರು ಹಂಚಿಕೊಂಡಿದ್ದಾರೆ. ಕಳೆದ ಬಾರಿ ಎರಡು ಕಡೆ ಬಿಜೆಪಿ ಶಾಸಕರೇ ಇದ್ದರು, ಆದರೆ ಬಡ, ಮಧ್ಯಮವರ್ಗದ ಜನತೆಗೆ ಉಪಯುಕ್ತವಾಗುವ ಇಂದಿರಾ ಕ್ಯಾಂಟೀನ್ ಯೋಜನೆ ಪ್ರಾರಂಬಿಸುವ ಪ್ರಯತ್ನ ಮಾಡಲೇ ಇಲ್ಲ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕ್ಷೇತ್ರದ ಶಾಸಕರೇ ಸಚಿವರಾದರೂ ಇಂದಿರಾ ಕ್ಯಾಂಟೀನ್ ಭಾಗ್ಯ ತಾಲೂಕಿನ ಜನತೆಗೆ ಒದಗಿ ಬಂದಿಲ್ಲ. ಹಾಗಾಗಿ ಇಂದು ನಡೆಯುವ ಕೆ ಡಿ ಪಿ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಚಾಲನೆ ಸಿಗಲಿದೆಯೇ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Share This
300x250 AD
300x250 AD
300x250 AD
Back to top