ಕಾರವಾರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಅಪಘಾತ ವಿಮೆಯ 15 ಲಕ್ಷ ಮೊತ್ತವನ್ನು ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಹೊನ್ನಾವರ ನಿವಾಸಿ ನರಸಿಂಹ ಸುಬ್ಬಯ್ಯ ಶೆಟ್ಟಿ ಅವರ ಮಕ್ಕಳಾದ ಧರ್ಮೇಂದ್ರ, ಲೋಕೇಶ್ ಹಾಗೂ ರೇಖಾ ತಮ್ಮ ತಂದೆ ನರಂಸಿಹ ಶೆಟ್ಟಿ ದ್ವಿಚಕ್ರ ವಾಹನದಲ್ಲಿ ಅಪಘಾತಗೊಂಡು ಹಲವು ತಿಂಗಳ ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದು, ವಾಹನದ ವಿಮೆಯ ಪ್ರಕಾರ ವೈಯಕ್ತಿಕ ಅಪಘಾತ ವಿಮೆ ರೂ.15 ಲಕ್ಷ ರೂಪಾಯಿಗಳಿದ್ದು, ಈ ಮೊತ್ತ ಪಾವತಿಸಲು ಯುನೈಟೆಡ್ ಇಂಡಿಯಾ ಇನ್ಸೂರನ್ಸ್ ಕಂಪನಿಗೆ ವಿನಂತಿಸಿದ್ದರು. ಆದರೆ ವಿಮಾ ಕಂಪನಿ ವಿಮಾ ಮೊತ್ತ ನೀಡದಿದ್ದಾಗ ಮೃತರ ಮಕ್ಕಳು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ, ವಿಮಾ ಕಂಪನಿ ವಿರುದ್ಧ ಆದೇಶಿಸಿ, ವಿಮಾ ಮೊತ್ತ ರೂ. 15 ಲಕ್ಷ ಗಳನ್ನು ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ದೂರುದಾರರಿಗೆ ಪರಿಹಾರವಾಗಿ ರೂ. 90,000 ಗಳನ್ನು ಹಾಗೂ ಖರ್ಚು ವೆಚ್ಚಕ್ಕಾಗಿ ರೂ.10000 ಗಳನ್ನು ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ.
ದೂರುದಾರರ ಪರ ನ್ಯಾಯವಾದಿ ಪಿ.ಎಸ್. ಭಟ್ ಹಾಗೂ ಇನ್ಸೂರನ್ಸ್ ಕಂಪನಿ ಪರವಾಗಿ ನ್ಯಾಯವಾದಿ ಎ.ಜಿ ಹಳದಿಪುರಕರ ವಾದ ಮಂಡಿಸಿದ್ದರು.