ಜೋಯಿಡಾ: ಸದಾ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ಎಲ್ಲರ ಗಮನ ಸೆಳೆಯುವ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಒಂದಾದ ನಮ್ಮ ಕೊಂದರ ಶಾಲೆ ಈಗ ಮತ್ತೊಮ್ಮೆ ಗಮನ ಸೆಳೆದಿದೆ. ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವ ಹಾಗೇ ಇಲ್ಲಿಯ ಶೈಕ್ಷಣಿಕ ಚಟುವಟಿಕೆಗಳಿಗೆ ಸದಾ ಶಿಕ್ಷಣ ಇಲಾಖೆ ಹಾಗೂ ಸಮುದಾಯದ ಸಹಭಾಗಿತ್ವ ಸಹಕಾರ ಸದಾ ಇದೆ.
ಖಾಸಗಿ ಶಾಲೆಗಳತ್ತ ಹೆಚ್ಚಿನ ಜನರ ಒಲವು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ,ಇಲ್ಲಿಯ ಶಾಲೆಯ ಮುಖ್ಯ ಶಿಕ್ಷಕರಾದ ಈರಣ್ಣ ಪಗಡಿಯವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸರಕಾರಿ ಶಾಲೆಗಳಲ್ಲಿ ಇರುವ ಲಾಭಗಳ ಮಾಹಿತಿಯನ್ನು ತಮ್ಮ ಸ್ವಂತ ವಿವೇಚನೆಯಿಂದ ಶಾಲಾ ಆಡಳಿತ ಮಂಡಳಿಯ ಸಹಯೋಗದಲ್ಲಿ ಬ್ಯಾನರ್ ನಲ್ಲಿ ಮುದ್ರಿಸಿ ಶಾಲಾ ಕೊಠಡಿಗೆ ಹಾಕಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.ನಮ್ಮ ಶಾಲೆ ನಮ್ಮ ಹೆಮ್ಮೆ ಎಂದು ಎಲ್ಲಾ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಓದಿಸಿ , ಪ್ರೋತ್ಸಾಹಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತನು ಮನ ಧನದಿಂದ ತೊಡಗಿಕೊಂಡಿದ್ದಾರೆ.