ಶಿರಸಿ: ಪ್ರೌಢಶಾಲೆ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿಯ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ “ಸುವರ್ಣ ಸುರಭಿ” ಸಭಾಂಗಣ ದಲ್ಲಿ ಜರುಗಿತು. ನಿವೃತ್ತ ಶಿಕ್ಷಕ ಗುರುಪಾದ ಸುಬ್ರಾಯ ಹೆಗಡೆ ಬನವಾಸಿ, ಕಮಟಿ ಇವರು ತಮ್ಮ ತಾಯಿಯ ಸ್ಮರಣಾರ್ಥ ನೀಡುವ ವಿಶೇಷ ಪುರಸ್ಕಾರವನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐವರು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ನೀಡಿ ಸನ್ಮಾನಿಸಲಾಯಿತು. ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದ ಕು. ಸೌಖ್ಯ ಹೆಗಡೆ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ ಇಂತಹ ವಿದ್ಯಾರ್ಥಿನಿ ಮುಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಎಂದು ಗಣ್ಯರು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ 2024 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ಸೌಖ್ಯ ಹೆಗಡೆ, ಡಿ.ಎಸ್. ನಾಗನಂದ, ಅನನ್ಯ ಶೇಡಗೇರಿ, ಭೂಮಿಕಾ ಗೌಡ, ಸೌಖ್ಯ ನಾಯ್ಕ ಇವರನ್ನು ಗುರುಪಾದ ಸುಬ್ರಾಯ ಹೆಗಡೆ ಅವರ ಮಾತೋಶ್ರೀ ಹೆಸರಿನಲ್ಲಿ ನೀಡುವ “ನಾಗವೇಣಿ ಹೆಗಡೆ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ” ವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವರ್ಣವಲ್ಲಿ ಕೃಷಿ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಮಾರ ಹಿಮಾಂಕ ಹೆಗಡೆ, ಕುಮಾರಿ ರಾಜ್ಯಮಟ್ಟದ ಪ್ರತಿಭೆ ಭುವನಾ ಹೆಗಡೆ ಇವರನ್ನು ಕೂಡ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಆತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ಗಜಾನನ ಪ್ರೌಢಶಾಲೆ ನಿವೃತ್ತ ಶಿಕ್ಷಕ ಎಸ್ ವಿ ಹೆಗಡೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರುಪಾದ ಹೆಗಡೆ ಅವರ ನಡೆ ನಮಗೆಲ್ಲ ಮಾದರಿ ಇದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಹುರುಪು ತುಂಬುತ್ತದೆ. ಈ ರೀತಿ ಪ್ರತಿಭೆ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು. ಇನ್ನೋರ್ವ ಅತಿಥಿ ಯಡಳ್ಳಿ ವಿದ್ಯೋದಯ ಪದವಿ ಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ ಜಿ.ಎನ್. ಹೆಗಡೆ ಆಡಳ್ಳಿ ಮಾತನಾಡಿ ವಿದ್ಯಾರ್ಥಿಗಳು ಭಾರತ ಸಂಸ್ಕೃತಿ ಅರಿತು ನಮ್ಮ ಸಂಸ್ಕೃತಿಯನ್ನು ಉತ್ತುಂಗಕ್ಕೇರಿಸುವ ಪ್ರಜೆಗಳಾಗಬೇಕು, ಹೆಗಡೆಕಟ್ಟಾ ಪ್ರೌಢಶಾಲೆ ಶಿಕ್ಷಕರು, ಊರ ನಾಗರಿಕರ ಸಮಾಜಪರ ಚಟುವಟಿಕೆಗಳನ್ನು ಪ್ರಶಂಸಿಸಿದರು. ಶ್ರೀ ಗಜಾನನ ಪ್ರೌಢಶಾಲೆ ಅಧ್ಯಕ್ಷ ಎಂ. ಆರ್.ಹೆಗಡೆ ಹೊನ್ನೆಕಟ್ಟಾ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾವಂತರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪ್ರತಿಭಾ ಪುರಸ್ಕಾರಕ್ಕೆ ಕಾರಣೀಭೂತರಾದ ಗುರುಪಾದ ಹೆಗಡೆ ಅವರ ಸಾಮಾಜಿಕ ಪ್ರತಿಭೆ ಗುರುತಿಸುವ ಮನೋಭಾವವನ್ನು ಕೊಂಡಾಡಿದರು. ಶಾಲೆಯ ಅಭಿವೃದ್ಧಿ, ಏಳ್ಗೆ ಇದರಲ್ಲಿ ಊರ ನಾಗರಿಕರ ಆಡಳಿತ ಮಂಡಳಿ ಸಹಕಾರ ಇದೆ. ಇದು ನಮ್ಮ ಪುಣ್ಯ ಎಂದರು.
ವೇದಿಕೆಯಲ್ಲಿ ಗುರುಪಾದ ಸುಬ್ರಾಯ ಹೆಗಡೆ ಅವರ ಮಾತೋಶ್ರೀ ನಾಗವೇಣಿ ಸುಬ್ರಾಯ ಹೆಗಡೆ, ಎಂ ವಿ ಹೆಗಡೆ ಹಲ್ಸಿನಕಟ್ಟಾ, ಮುಖ್ಯಾಧ್ಯಾಪಕ ಶೈಲೇಂದ್ರ ಎಂ ಎಚ್ , ಅನಿತಾ ಹೆಗಡೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮವನ್ನು ಶಿಕ್ಷಕ ಆರ್ ಎನ್ ಹೆಗಡೆ ನಿರ್ವಹಿಸಿದರು, ಶಿಕ್ಷಕಿ ವೀಣಾ ಭಟ್ಟ ವಂದಿಸಿದರು.