ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜೂನ್ 9 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ನಾಯಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಸಹ ಏರ್ಪಡಿಸಲಾಗಿದೆ.
ಪ್ರಮಾಣ ವಚನ ಸಮಾರಂಭದಲ್ಲಿ ವಿವಿಧ ವೃತ್ತಿಪರರು ಮತ್ತು ಸಾಂಸ್ಕೃತಿಕ ಸಾಧಕರು ಸೇರಿದಂತೆ 8,000 ಅತಿಥಿಗಳು ಭಾಗವಹಿಸಲಿದ್ದಾರೆ.
ಮುರ್ಮು ಅವರು ಭಾನುವಾರ ಸಂಜೆ 7:15 ಕ್ಕೆ ಪ್ರಧಾನ ಮಂತ್ರಿ ಮತ್ತು ಕೇಂದ್ರ ಸಚಿವ ಸಂಪುಟದ ಇತರ ಸದಸ್ಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.
ಮಾಲ್ಡೀವ್ಸ್, ಬಾಂಗ್ಲಾ, ನೇಪಾಳ, ಶ್ರೀಲಂಕಾದ ನಾಯಕರು ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುವುದು ಬಹುತೇಕ ಖಚಿತವಾಗಿದೆ. ಹಣ್ಯರ ಆಗಮನದ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗ ಬಂದೋಬಸ್ತ್ ಏರ್ಪಡಿಸಲಾಗಿದೆ. ಡ್ರೋಣ್ ಸೇರಿದಂತೆ ಯಾವುದೇ ವೈಮಾನಿಕ ಹಾರಾಟವನ್ನು ಜೂನ್ 10ರವರೆಗೆ ನಿಷೇಧಿಸಲಾಗಿದೆ.
18 ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 15 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ, ಮೊದಲ ಎರಡು ದಿನಗಳಲ್ಲಿ ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಹೊಸ ಸ್ಪೀಕರ್ ಅನ್ನು ತರುವಾಯ ಚುನಾಯಿಸಲಾಗುತ್ತದೆ ಮತ್ತು ರಾಷ್ಟ್ರಪತಿಗಳು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅಧಿವೇಶನವನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಜೂನ್ 22ಕ್ಕೆ ಅಧಿವೇಶನ ಮುಕ್ತಾಯವಾಗುವ ಸಾಧ್ಯತೆ ಇದೆ.