ವರದಿ : ಸಂದೇಶ್.ಎಸ್.ಜೈನ್ ದಾಂಡೇಲಿ: ಸಮಾಜದ ಬಗ್ಗೆ ಏನೆಂದು ಅರಿಯದ ಮುಗ್ಧ ಪುಟಾಣಿ ಇಂದು ಇಂಡಿಯ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ. ಇದೊಂದು ಅಸಾಮಾನ್ಯವಾದ ದೈತ್ಯ ಸಾಧನೆ ಎಂದರೆ ಅತಿಶಯೋಕ್ತಿ ಎನಿಸದು.
ಇಂತಹ ಅಪರೂಪದ ಅಪೂರ್ವ ಸಾಧನೆಗೈದ ದಾಂಡೇಲಿಯ ಹೆಮ್ಮೆಯ ಪುಟಾಣಿ ಅನೋಷ್ ರೋಹಿತ್ ಸ್ವಾಮಿ. ಅಂದ ಹಾಗೆ ಈ ಪುಟಾಣಿಯ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಯಾಕೆ ದಾಖಲಾಯಿತು? ಎಂಬುದರ ವರದಿ ಇಲ್ಲಿದೆ.
ದಾಂಡೇಲಿ ನಗರದ ವಿಜಯನಗರದ ನಿವಾಸಿ ರೋಹಿತ್ ಸ್ವಾಮಿ ಹಾಗೂ ಮರ್ಲಿನ್ ಸ್ವಾಮಿ ದಂಪತಿಗಳ ಮುದ್ದಿನ ಸುಪುತ್ರ ಈ ಮೂರೂವರೆ ವರ್ಷ ಪ್ರಾಯದ ಅನೋಷ್ ರೋಹಿತ್ ಸ್ವಾಮಿ.
ರೋಹಿತ್ ಸ್ವಾಮಿ ದಂಪತಿ ದಾಂಡೇಲಿಯ ನಿವಾಸಿಗಳಾಗಿದ್ದರೂ ಸದ್ಯ ಹುಬ್ಬಳ್ಳಿಯಲ್ಲಿ ಉದ್ಯೋಗದಲ್ಲಿ ಇರುವುದರಿಂದ ಹುಬ್ಬಳ್ಳಿಯಲ್ಲಿ ವಾಸ್ತವ್ಯವನ್ನು ಹೂಡಿದ್ದಾರೆ. ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ತಂದೆ ತಾಯಿಗಳ ಪಾತ್ರ ಅತಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎನ್ನುವುದಕ್ಕೆ ಅನೋಷ್ ರೋಹಿತ್ ಸ್ವಾಮಿ ನೈಜ ಉದಾಹರಣೆಯಾಗಿದ್ದಾನೆ.
ಅನೋಷ್ ಹುಟ್ಟಿ ಒಂದುವರೆ ವರ್ಷ ಆಗುತ್ತಿರುವಾಗಲೇ ಅವನಲ್ಲಿರುವ ಕ್ರಿಯಾಶೀಲತೆಯನ್ನು ಬಹಳ ಸೂಕ್ಷ್ಮ ಮನಸ್ಸಿನಿಂದ ಆತನ ತಾಯಿ ಮರ್ಲಿನ್ ಸ್ವಾಮಿ ಅರಿತುಕೊಂಡರು. ಒಂದು ಸಲ ಹೇಳಿದ್ದನ್ನು ಹಾಗೇನೇ ನೆನಪಿಟ್ಟುಕೊಳ್ಳುವ ಜಾಣ್ಮೆಯನ್ನು ಗಮನಿಸಿದ ಮರ್ಲಿನ್ ಅವರು ಪುಟಾಣಿಯ ಕ್ರಿಯಾಶೀಲತೆಗೆ ಅನುಗುಣವಾಗಿ ಮುಂದೆ ಮೂರು ವರ್ಷ ಆಗುತ್ತಿದ್ದಂತೆಯೇ, ಅವನಿಗೆ ಸಾಧ್ಯವಾದಷ್ಟು ತರಬೇತಿಯನ್ನು ನೀಡಿದರು. ಹೀಗೆ ಬೆಳೆದ ಈ ಪುಟಾಣಿ ವಾರದ ಹೆಸರು, ತಿಂಗಳ ಹೆಸರು, ಚಿತ್ರ ನೋಡಿ ವಿವಿಧ ಪ್ರಾಣಿಗಳ ಹೆಸರು, ಚಿತ್ರ ನೋಡಿ ವಿವಿಧ ಪಕ್ಷಿಗಳ ಹೆಸರು, ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ, ರೈಮ್ಸ್, ವಿವಿಧ ವೃತ್ತಿಗಳ ಬಗ್ಗೆ ಅಭಿನಯದ ಮೂಲಕ ತೋರಿಸಿದಾಗ ಆಯಾಯ ವೃತ್ತಿಯನ್ನು ಹೇಳುವುದು, ಪ್ರಸಕ್ತ ಸನ್ನಿವೇಶದ ಬಗ್ಗೆ ಉತ್ತರಿಸುವುದು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿಯವರ ಹೆಸರನ್ನು ಹೇಳುವುದು, ರಾಜ್ಯ, ಜಿಲ್ಲೆ, ತಾಲೂಕಿನ ಹೆಸರನ್ನು ಹೇಳುವುದನ್ನು ಕರಗತ ಮಾಡಿಕೊಂಡು ಸಾಧನೆಯ ಸಾಧಕನಾಗುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾನೆ ಅನೋಷ್.
ಪುಟಾಣಿಯ ಸಾಧನೆಗೆ ಸರಿಯಾದ ಸಮಯದಲ್ಲಿ ಪರಿಪಕ್ವವಾಗಿ ಬೆಳೆಯುವ ಮತ್ತು ಬೆಳೆಸುವ ನಿಟ್ಟಿನಲ್ಲಿ ರೋಹಿತ್ ಮತ್ತು ಮರ್ಲಿನ್ ಅವರಿಬ್ಬರು ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಅನೋಷ್‌ನ ಸಾಧನೆ ಎಂದು ಜಗದಗಲಕ್ಕೆ ಪಸರಿಸಿದೆ. ಸಾಧನೆಗೆ ಮತ್ತಷ್ಟು ಕೀರ್ತಿ ಎಂಬಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅನೋಷ್ ರೋಹಿತ್ ಸ್ವಾಮಿಯ ಹೆಸರು ದಾಖಲಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಮೂರುವರೆ ವರ್ಷದ ಪುಟಾಣಿಯ ಹೆಸರು ದಾಖಲಾಗುವುದು ಪುಟ್ಟ ಪುಟಾಣಿಯ ಬಹುದೊಡ್ಡ ಸಾಧನೆಯೆ ಆಗಿದೆ. ಪುಟಾಣಿ ಅನೋಷ್ ರೋಹಿತ್ ಸ್ವಾಮಿಯ ಸಾಧನೆ ಕೇವಲ ಆತನ ಕುಟುಂಬಕ್ಕೆ ಗೌರವ ತಂದಿರುವುದರ ಜೊತೆಯಲ್ಲಿ ಹೆಮ್ಮೆಯ ಭೂಮಿ ದಾಂಡೇಲಿಗೂ ಬಹುದೊಡ್ಡ ಹೆಮ್ಮೆ ಮತ್ತು ಗೌರವವನ್ನು ತಂದುಕೊಟ್ಟಿದೆ.
ಅನೋಷ್ ರೋಹಿತ್ ಸ್ವಾಮಿಯ ಈ ಸಾಧನೆಗೆ ಪ್ರೇರಣಾದಾಯಿಗಳಾಗಿ ರೋಹಿತ್ ಸ್ವಾಮಿ ಮತ್ತು ಮರ್ಲಿನ್ ಸ್ವಾಮಿ ಹಾಗೂ ಈ ಪುಟಾಣಿಯ ಚೈತನ್ಯದಾಯಕ ಕ್ರಿಯಾಶೀಲತೆಗೆ ಅಜ್ಜ ಅಜ್ಜಿಗಳಾದ ವಿಜಯನಗರದ ಸಿದ್ದರಾಮ ಸ್ವಾಮಿ, ಸುಶೀಲ ಮತ್ತು ಅಜ್ಜಿ ಸುಭಾಷ್ ನಗರದ ಸವಿತಾ ದಯಾನಂದ ದಂಡಗಿ ಅವರುಗಳ ಅಕ್ಕರೆಯ ಆಶೀರ್ವಾದ ಮತ್ತು ಕುಟುಂಬಸ್ಥರ ಪ್ರೀತಿಯ ಪ್ರೋತ್ಸಾಹವು ಬಹುಮೂಲ್ಯ ಕೊಡುಗೆಯಾಗಿದೆ.