ಶಿರಸಿ: ಕಳೆದ ಶ್ರೀ ಮಾರಿಕಾಂಬಾ ಜಾತ್ರಾ ಸಮಯದಲ್ಲಿ 5,400 ಕ್ಕೂ ಅಧಿಕ ವಯೋವೃದ್ಧ, ವಿಕಲಚೇತನ ಭಕ್ತಾದಿಗಳಿಗೆ ಉಚಿತವಾಗಿ ಆಟೋ ರಿಕ್ಷಾ ಸೇವೆ ಮತ್ತು ದರ್ಶನ ಸೇವೆಯನ್ನು ಒದಗಿಸುವುದರ ಜೊತೆಗೆ ಲೋಕಸಭೆ ಚುನಾವಣೆಯಲ್ಲಿಯೂ ಸಹ ಅಶಕ್ತರಿಗೆ ಉಚಿತ ಆಟೋ ರಿಕ್ಷಾ ಸೇವೆ ಒದಗಿಸಿ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಇತ್ತಿಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಖ್ಯಾತ ಉದ್ಯಮಿ ಲಯನ್ ಪ್ರದೀಪ್ ಎಲ್ಲಂಕರ್ ಹಾಗು ಇವರಿಗೆ ಸಹಕಾರಿಯಾಗಿ ಆಟೋ ರಿಕ್ಷಾ ಸೇವೆ ನೀಡಿದವರನ್ನು ಸ್ಮರಿಸಿ, ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಶಿರಸಿ ಇದರ ವತಿಯಿಂದ ಲಯನ್ಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟೋ ಸೇವೆ ಒದಗಿಸಿದ ಆಟೋ ರಿಕ್ಷಾ ಡ್ರೈವರ್ ಗಳಾದ ರಾಜೀವ ನಾಯ್ಕ, ಸೋಮಶೇಖರ್ ಕುರುಬರ್, ಗಣಪತಿ ಸಕಲಾತಿ ಹಾಗು ವೀಲ್ ಚೇರ್ ಆಪರೇಟರ್ ಕರಿಬಸಪ್ಪ ಚಕ್ರಸಾಲಿ ಇವರನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಒಳಗೊಂಡ ಪದಾಧಿಕಾರಿಗಳು ಮುಕ್ತಕಂಠದಿಂದ ಸೇವೆಯಲ್ಲಿ ಶ್ಲಾಘಿಸಿ, ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ಜೊತೆಗೆ ಪ್ರದೀಪ್ ಎಲ್ಲಂಕರ್ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 264 ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿರುವ ಮಹತ್ ಕಾರ್ಯವನ್ನೂ ಇದೇ ವೇಳೆ ಉಲ್ಲೇಖಿಸಿ, ಗೌರವಿಸಲಾಯಿತು. ಈ ವೇಳೆ ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಅಶೋಕ ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.