Slide
Slide
Slide
previous arrow
next arrow

ಜೂ.9ಕ್ಕೆ ‘ಗಂಗಕನ್ದರ್ಪ’ ಗ್ರಂಥ ಸಮರ್ಪಣೆ

300x250 AD

ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಅಭಿನಂದನಾ ಕಾರ್ಯಕ್ರಮ

ಬೆಂಗಳೂರು : ಕರ್ನಾಟಕದ ಇತಿಹಾಸ, ಶಾಸನಶಾಸ್ತ್ರ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ವಿಶೇಷವಾಗಿ ಕನ್ನಡ ಲಿಪಿತಜ್ಞರಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿರುವ ‘ಕನ್ನಡದ ಖ್ಯಾತ ಶಾಸನತಜ್ಞ’ ಹಾಗೂ ‘ಅಭಿನವ ರೈಸ್’ ಎಂದೇ ಗುರುತಿಸಲ್ಪಟ್ಟಿರುವ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಅವರಿಗೆ ೭೫ ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಶಿಷ್ಯವೃಂದ, ಸ್ನೇಹಿತರು, ಬಂಧುವರ್ಗದವರು ಸೇರಿ ಸಮಸ್ತ ಕನ್ನಡಿಗರ ಪರವಾಗಿ ಇದೇ ಬರುವ ಜೂನ್ 9 ರಂದು ಭಾನುವಾರ ಮುಂಜಾನೆ 11-00ಗಂಟೆಗೆ ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಾ. ದೇವರಕೊಂಡಾರೆಡ್ಡಿ ಅವರ ಆಸಕ್ತಿ ವಿಷಯವಾದ ಕರ್ನಾಟಕ ಇತಿಹಾಸದಲ್ಲಿ ಅವಿಸ್ಮರಣೀಯವಾದ ಸಾಧನೆ ಮಾಡಿದ ಗಂಗರಸರನ್ನು ಕುರಿತಂತೆ ಸಮಗ್ರನೋಟವನ್ನು ನೀಡುವಂಥ ‘ಗಂಗಕನ್ದರ್ಪ’ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಗುವುದು. ಪ್ರೊ. ಜಿ.ಕೆ. ದೇವರಾಜಸ್ವಾಮಿಯವರ ಪ್ರಧಾನ ಸಂಪಾದಕತ್ವದಲ್ಲಿ ಡಾ. ವಿ. ಸಂಧ್ಯಾ, ಡಾ. ಆರ್. ಯುವರಾಜು, ಎ. ಪವನ್ ಮೌರ್ಯ ಚಕ್ರವರ್ತಿ ಇವರುಗಳು ಸಂಪಾದಿಸಿರುವ ‘ಗಂಗಕನ್ದರ್ಪ’ ಅಭಿನಂದನ ಗ್ರಂಥವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಬಿಡುಗಡೆಮಾಡಿ ಸಮರ್ಪಿಸಲಿದ್ದಾರೆ. ಖ್ಯಾತ ಇತಿಹಾಸತಜ್ಞ ಡಾ. ಲಕ್ಷ್ಮಣ್ ತೆಲಗಾವಿ ಧಾರವಾಡ ಅಭಿನಂದನ ಪರ ಮಾತುಗಳನ್ನಾಡಲಿದ್ದಾರೆ. ದಿ ಮಿಥಿಕ್ ಸೊಸೈಟಿ, ಬೆಂಗಳೂರು ಇದರ ಅಧ್ಯಕ್ಷ ವಿ. ನಾಗರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಅನೇಕ ನಾಮಾಂಕಿತ ಲಿಪಿತಜ್ಞರು, ಇತಿಹಾಸಕಾರರು, ವಿದ್ವಾಂಸರು ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ನಾಡಿನ ಎಲ್ಲ ಸಹೃದಯರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿರುವುದಾಗಿ ಡಾ. ದೇವರಕೊಂಡಾರೆಡ್ಡಿ ಅಭಿನಂದನ ಸಮಿತಿಯ ಪದಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

ಡಾ. ದೇವರಕೊಂಡಾರೆಡ್ಡಿ ಇವರು, ಕನ್ನಡನಾಡಿನ ಶಾಸನಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಕಳೆದ ಐವತ್ತಕ್ಕೂ ಹೆಚ್ಚಿನ ವರ್ಷಗಳಿಂದ ನಾಡಿನಾದ್ಯಂತ ಅಜ್ಞಾತವಾಗಿ ಬಿದ್ದಿದ್ದ ಅಪ್ರಕಟಿತ ಶಾಸನಗಳನ್ನು ವ್ಯವಸ್ಥಿತ ರೀತಿಯಲ್ಲಿ ಅನ್ವೇಷಿಸಿ ಆಕರಸ್ವರೂಪಿ ಸಂಪುಟಗಳನ್ನು ರೂಪಿಸಿದ ಕೀರ್ತಿ ಡಾ. ದೇವರಕೊಂಡಾರೆಡ್ಡಿ ಅವರದು. ಅದರಲ್ಲೂ ಉತ್ತರಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ಹಂಪಿ, ರಾಯಚೂರು, ಬೀದರ್, ಬಾಗಲಕೋಟೆ, ಬಿಜಾಪುರ ಜಿಲ್ಲಾ ಶಾಸನ ಸಂಪುಟಗಳಲ್ಲದೆ, ‘ಕರ್ನಾಟಕ ಜೈನಶಾಸನಗಳು’ ಮಾಲಿಕೆಯ ಐದು ಸಂಪುಟಗಳು ಇವರ ಆವಿಷ್ಕರಣಾತ್ಮಕ ನೆಲೆಯಲ್ಲಿ ಸಂಪಾದಿತಗೊಂಡ ರೂಪನಿಷ್ಠ ಶಾಸನ ಸಂಪುಟಗಳು. ಇವು ಗತಕಾಲದ ಸಂಗತಿಗಳಾದರೂ ಅವುಗಳೊಂದಿಗೆ ಭಾವನಾತ್ಮಕ ಅನುಸಂಧಾನ ಮಾಡುವ ಮೂಲಕ ಶಾಸನಾಧ್ಯಯನಕ್ಕೆ ಸೈದ್ಧಾಂತಿಕ ಚೌಕಟ್ಟನ್ನು ಹಾಕಿಕೊಟ್ಟಂತಹವು. ಡಾ. ರೆಡ್ಡಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ನಿಕಾಯದ ಡೀನ್ ಆಗಿ, ಪಿಎಚ್.ಡಿ. ಮಾರ್ಗದರ್ಶಕರಾಗಿ ಸ್ಮರಣೀಯ ಕಾರ್ಯವೆಸಗಿದ್ದಾರೆ. ವ್ಯಕ್ತಿಗತ ಹಾಗೂ ಸಾಂಸ್ಥಿಕ ನೆಲೆಯಲ್ಲಿ ಸಂಘಟನಾಚತುರರಾಗಿ ಇವರು ಹಮ್ಮಿಕೊಂಡ ಯೋಜನೆಗಳು ಹಲವಾರು. ಅದರಲ್ಲೂ ಕರ್ನಾಟಕ ಇತಿಹಾಸ ಅಕಾದೆಮಿಯ ಅಧ್ಯಕ್ಷರಾಗಿ ಕಳೆದ ಹದಿನೈದು ವರುಷಗಳಿಂದ ಅಕಾದೆಮಿಯ ಕಾರ್ಯಚಟುವಟಿಕೆಗಳು ಜನಮುಖಿಯಾಗುವಂತೆ ರೂಪಿಸುವುದರ ಮೂಲಕ ಅದರ ಸರ್ವಾಂಗೀಣ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ನಿರಂತರ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ದೇವರಕೊಂಡಾರೆಡ್ಡಿ ಅವರ ಲೇಖನಿಯಿಂದ ಮೂಡಿಬಂದಿರುವ ಕೃತಿಗಳು. ಸಂಶೋಧನ ಲೇಖನಗಳು, ಕನ್ನಡನಾಡಿನ ಸಾಂಸ್ಕೃತಿಕ ಅಧ್ಯಯನ ಮಾಡುವವರು ಪರಾಮರ್ಶಿಸಲೇಬೇಕಾದ ಆಕರಗಳೆನಿಸಿವೆ. ಅಕ್ಷರದಷ್ಟೇ ಅಕ್ಕರೆಯ ವ್ಯಕ್ತಿತ್ವ ಹೊಂದಿರುವ ಇವರು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಸೌಜನ್ಯ, ನೈತಿಕತೆ, ಪ್ರಾಮಾಣಿಕತೆಗಳು ಈ ಹೊತ್ತಿನ ಸಂದರ್ಭದಲ್ಲಿ ಇತರರಿಗೆ ಅನುಕರಣೀಯವಾದವುಗಳು.

Share This
300x250 AD
300x250 AD
300x250 AD
Back to top