Slide
Slide
Slide
previous arrow
next arrow

ನ್ಯಾಯಕ್ಕಾಗಿ ಕೋರ್ಟಿಗೆ ಹೋಗುವುದು ಒಳಿತು;ಪ್ರಚಾರಕ್ಕಾಗಿ ಬೀದಿರಂಪ ಮಾಡುವುದು ಹಳತು

300x250 AD

ಪ್ರಚಾರಕ್ಕಿಂತ ವಿಚಾರ ಶ್ರೇಷ್ಠ ಎಂದ ಸದಸ್ಯರು | ವ್ಯವಸ್ಥೆಯಲ್ಲಿ ಕಾನೂನು ಹೋರಾಟವೇ ಮೊದಲಾಗಲಿ

ಗೋಪಿಕೃಷ್ಣ 🖋

ಹಸಿವಾದಾಗ ಸಾಮಾನ್ಯವಾಗಿ ಅನ್ನ ಊಟ ಮಾಡ್ತಾರೆ. ಅದನ್ನ ಬಿಟ್ಟು ತೀರಾ ಹಸಿವಾಗಿದೆಯೆಂದು, ಗದ್ದೆಗೆ ಹೋಗಿ ಜನರ ಕರೆಸಿ ಸಸಿ ನಾಟಿ ಮಾಡಿ, ಭತ್ತ ಬೆಳೆದು ಅಕ್ಕಿ ಮಾಡಿಸಿಕೊಂಡು ಊಟ ಮಾಡುತ್ತೇನೆ ಎಂದು ಕುಳಿತರೆ ಅಂತವರಿಗೆ ಬುದ್ಧಿವಂತರು ಎನ್ನುವುದಿಲ್ಲ. ಯಾವ ಕೆಲಸವನ್ನು ಯಾವಾಗ ಮಾಡಬೇಕೋ ಆಗ ಮಾಡಿದರೆ ಚೆನ್ನ. ಭತ್ತ ಬೆಳೆಯುವ ಸಮಯಕ್ಕೆ ಭತ್ತ ಬೆಳೆಯಬೇಕು. ಊಟ ಮಾಡುವ ಸಮಯಕ್ಕೆ ಊಟ ಮಾಡಬೇಕು. ಪ್ರಸ್ತುತ ಬೆಳವಣಿಗೆಯನ್ಮು ಗಮನಿಸಿದರೆ ಸಹಕಾರಿ ಸಾಕ್ಷರರ ಕಥೆಯೂ ಭತ್ತ ಬೆಳೆಯಲು ಹೋದಂತೆ ಕಾಣುತ್ತದೆ.

ಸಕ್ಷಮ ಪ್ರಾಧಿಕಾರಕ್ಕೆ ಹೋಗಿದ್ದ ಎದುರುದಾರರು: ಕಳೆದ ಅಗಸ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಕೆಲವು ಸದಸ್ಯರಿಗೆ ನಿರ್ದೇಶಕ ಸ್ಥಾನಕ್ಕೆ ಸಹಕಾರ ಸಂಘಗಳ ಕಾಯ್ದೆಯನ್ವಯ ಸ್ಪರ್ಧಿಸಲು ಅನರ್ಹ ಇದ್ದಾರೆ ಎಂದು ಸಂಸ್ಥೆಯ ಹಲವು ಸದಸ್ಯರೇ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದೇ ನಾಮಪತ್ರ ಸಲ್ಲಿಸಿದ್ದ ಎಲ್ಲರನ್ನು ಚುನಾವಣೆಗೆ ಅರ್ಹ ಎಂದು ಚುನಾವಣಾಧಿಕಾರಿ ಯಾವುದೋ ಒತ್ತಡ, ಆಮೀಷಕ್ಕೆ ಮಣಿದು ಘೋಷಿಸಿದ್ದರು ಎನ್ನಲಾಗಿದೆ. ಆ ಕೂಡಲೇ ಅದನ್ನು ಚುನಾವಣಾಧಿಕಾರಿಯೆದುರು ಕೆಲ ಸದಸ್ಯರು ಪ್ರಶ್ನಿಸಿದಾಗ್ಯೂ, ಸಕ್ಷಮ ಪ್ರಾಧಿಕಾರದಲ್ಲಿ ಈ ಸಂಬಂಧಿ ದೂರು ನೀಡಿ ಪ್ರಕರಣ ದಾಖಲಿಸುವಂತೆ ಹೇಳಿದ್ದರು. ಅದರಂತೆ ತಮಗಾದ ಅನ್ಯಾಯವನ್ನು ಪ್ರಶ್ನಿಸಿ ಸಕ್ಷಮ ಪ್ರಾಧಿಕಾರವಾದ ಜಿಲ್ಲಾ ಸಹಕಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಅಂದರೆ ಈ ಹಂತದಲ್ಲಿ ಅರ್ಜಿದಾರರು ನಮಗೆ ನ್ಯಾಯ ಸಿಗಲಿಲ್ಲ ಎಂದು ಮುಂದಿನ ಹಂತಕ್ಕೆ ನ್ಯಾಯಕ್ಕಾಗಿ ಆಗಲೇ ಮನವಿ ಸಲ್ಲಿಸಿ, ಕಾನೂನು ಹೋರಾಟ ಕೈಗೊಂಡಿದ್ದರು. ಅದರ ಫಲವಾಗಿ ವಾದಿ-ಪ್ರತಿವಾದಿಗಳ ವಾದಗಳನ್ನು ಆಲಿಸಿದ ಕೋರ್ಟ್, ಸಹಕಾರಿ ಸಂಘಗಳ ನಿಯಮದನ್ವಯ ಚುನಾವಣಾಧಿಕಾರಿ ಕರ್ತವ್ಯ ಲೋಪ ಎಸಗಿರುವುದು ಸಾಬಿತಾಗಿದೆ, ಹಾಗಾಗಿ ಚುನಾವಣಾ ಪ್ರಕ್ರಿಯೆಯೇ ಅಸಿಂಧು. ಅದರಂತೆ ಫಲಿತಾಂಶವನ್ನು ತಡೆಹಿಡಿದು, ಅಧಿಕಾರಕ್ಕೇರಿದ್ದ ಆಡಳಿತ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಿ, ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಇದು ನಡೆದಿರುವ ಸಂಗತಿ.

ಅನ್ಯಾಯವಾದಾಗ ನ್ಯಾಯಾಲಯದ ಮೆಟ್ಟಿಲೇರುವುದು ಸಹಜ ಪ್ರಕ್ರಿಯೆ:

300x250 AD

ಯಾವುದೇ ವಿಷಯದಲ್ಲಿ ನಮಗೆ ದೊರಕಿದ್ದು ನ್ಯಾಯ ಎನಿಸದಿದ್ದರೆ ನ್ಯಾಯಾಲಯಕ್ಕೆ ಹೋಗುವ ಅವಕಾಶ ಪ್ರತಿಯೊಬ್ಬರಿಗೂ ಇದೆ. ಮತ್ತು ನ್ಯಾಯ ಪಡೆಯುವುದು ಅವರ ಮೂಲಭೂತ ಹಕ್ಕೂ ಹೌದು. ಆದರೆ ನಾವು ಯಾವ ಚೌಕಟ್ಟಿನಲ್ಲಿ, ಯಾವ ವ್ಯವಸ್ಥೆಯಲ್ಲಿದ್ದೇವೆ ಎಂಬುದನ್ನು ಒಮ್ಮೆ ವಿಚಾರ ಮಾಡಬೇಕು. ಅನ್ಯಾಯ ಆಗಿದೆ ಎಂದು ಪ್ರತಿಭಟನೆ ಮಾಡುವುದು ನಿಜವಾಗಿಯೂ ತಪ್ಪಲ್ಲ. ಆದರೆ ಯಾವ ಕಾರಣಕ್ಕೆ, ಯಾವ ವಿಷಯಕ್ಕಾಗಿ ಪ್ರತಿಭಟನೆ ಎಂಬುದನ್ನು ಸಹಕಾರಿ ವ್ಯವಸ್ಥೆಯಲ್ಲಿರುವ ಹಿರಿಯರು ಗಮನಿಸಬೇಕು. ಎದುರುದಾರರು ತಮಗೆ ಚುನಾವಣಾಧಿಕಾರಿಯಿಂದ ಅನ್ಯಾಯವಾಗಿದೆ ಎಂದು ಚುನಾವಣಾ ಸಮಯದಲ್ಲಿ ಸದಸ್ಯರಲ್ಲದ ಜನರನ್ನು, ಗೂಂಡಾಗಳನ್ನು ಕರೆಯಿಸಿ ಪ್ರತಿಭಟನೆ ಮಾಡಿಲ್ಲ. ಬದಲಾಗಿ ಕಾನೂನನ್ನು ತಮ್ಮ ಹೋರಾಟದ ಅಸ್ತ್ರವನ್ನಾಗಿಸಿದರು. ನ್ಯಾಯಾಲಯದ ಮೆಟ್ಟಿಲೇರಿದರು. ಚುನಾವಣಾಧಿಕಾರಿಯ ಮೇಲಿನ ತಮ್ಮ ಆರೋಪಗಳಿಗೆ ಸಾಕ್ಷ್ಯ ನೀಡಿದರು. ವಾದಿಸಿದರು, ಪ್ರತಿವಾದಿಯ ವಾದದಲ್ಲಿ ಹುರುಳಿಲ್ಲ ಎಂದು ಸಾಕ್ಷಿ, ಪುರಾವೆಯ ಆಧಾರದಲ್ಲಿ ನಿರೂಪಿಸಿದರು. ಅದರ ಪರಿಣಾಮ ನ್ಯಾಯಾಲಯ ತೀರ್ಪು ಪ್ರಕಟಿಸಿತು. ಒಂದು ವೇಳೆ ಈಗಿನ ತೀರ್ಪು ಅರ್ಜಿದಾರರ ವಿರುದ್ಧ ಬಂದಿದ್ದರೆ ಮುಂದಿನ ಕಾನೂನು ಹೋರಾಟಕ್ಕಾಗಿ ಮೇಲಿನ ಕೋರ್ಟ್ ಗೆ ಹೋಗುತ್ತಿದ್ದರು. ಅದು ಒಂದು ವ್ಯವಸ್ಥೆಯಲ್ಲಿ ಇರುವವರಿಗೆ, ವ್ಯವಸ್ಥೆಯನ್ನು ಗೌರವಿಸುವವರಿಗೆ ಶೋಭೆ. ಪ್ರತಿಭಟನೆ ಎನ್ನುವುದು ಜನರನ್ನು ಜಾಗೃತಾವಸ್ಥೆಯಲ್ಲಿ ಇಡಬಹುದಾದ ಒಂದು ಪ್ರಯತ್ನ. ಖಂಡಿತವಾಗಿಯೂ ಅದು ತಪ್ಪಲ್ಲ ಆದತೆ ಅದು ಹೋರಾಟದ ಮೊದಲ ಆಯ್ಕೆಯ ಬದಲು ಕೊನೆ ಆಯ್ಕೆಯಾದರೆ ಚಂದ ಎನಿಸುತ್ತದೆ.

ಪ್ರಚಾರ ಪ್ರಿಯರಾಗಬೇಡಿ, ವಿಚಾರಪ್ರಿಯರಾಗಿ:

ಯಾವ ವಿಷಯವೇ ಆಗಲಿ, ನಮ್ಮ ವಿಚಾರ ಮೊದಲು ಗಟ್ಟಿಯಿರಬೇಕು. ಆ ವಿಚಾರದ ಅನುಷ್ಠಾನಕ್ಕಾಗಿ ಪ್ರಚಾರ ಮಾಡಬೇಕು. ಅಪಪ್ರಚಾರವನ್ನಲ್ಲ ಮತೇ. ಆದರೆ ಯಾವಾಗ ವಿಚಾರವೇ ಗಟ್ಟಿಯಿರುವುದಿಲ್ಲವೋ ಆಗ ಪ್ರಚಾರ, ಅಪಪ್ರಚಾರದ ಸರಕುಗಳು, ಅವಶ್ಯಕತೆಗಳು ಹೆಚ್ಚು ಬೇಕಾಗುತ್ತದೆ. ಜನತೆಗೆ ತಿಳಿಸಲು ವಿಚಾರ ಇಲ್ಲದಿರುವಾಗ ಅವರ ಬುದ್ಧಿಯನ್ನು ತುಸು ಸೆಳೆಯಲು ಪ್ರಖರ ಭಾಷಣ, ಅಪಪ್ರಚಾರಗಳು ಬೇಕಾಗುತ್ತದೆ. ಆದರೆ ಸಮಾಜ ವ್ಯವಸ್ಥೆಯಲ್ಲಿ ಇರುವವರು ಇದನ್ನೆಲ್ಲವನ್ನು ಸೂಕ್ಷ್ಮವಾಗಿ ಇರುವಲ್ಲಿಯೇ ಗಮನಿಸುತ್ತಿರುತ್ತಾರೆ. ಯಾರದ್ದು ವಿಚಾರಗಟ್ಟಿಯಿದೆ. ಸತ್ಯಪರಯಿದೆ. ಮತ್ಯಾರದ್ದು ಕೇವಲ ಬಾಯಿ ಚಪಲಕ್ಕೋಸ್ಕರ ಪ್ರಚಾರದ ಗೀಳಾಗಿದೆಯೆಂದು. ಒಂದು ವ್ಯವಸ್ಥೆಯ ಚೌಕಟ್ಟಿನಲ್ಲಿ ಇರುವವರು ಅನ್ಯಾಯವಾಗಿದೆಯೆಂದು ಎಷ್ಟೇ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಜನಾಂದೋಲನ ಮಾಡಿದರೂ ಸಹ ಅಂತಿಮವಾಗಿ ಅವರೆಲ್ಲರೂ ನ್ಯಾಯಕ್ಕಾಗಿ ನ್ಯಾಯಾಲಯಕ್ಕೇ ಹೋಗಬೇಕು. ಅಲ್ಲಿ ತಮ್ಮಗಾದ ಅನ್ಯಾಯಕ್ಕೆ ಸಾಕ್ಷಿ, ಪುರಾವೆ ಕೊಟ್ಟು ವಾದಿಸಬೇಕು. ಕಾನೂನು ಹೋರಾಟ ನಡೆಸಬೇಕು. ಆದರೆ ಅನ್ಯಾಯ ಆಗಿದೆ ಎಂದು ಪ್ರಲಾಪಿಸುತ್ತಿರುವವರು ನ್ಯಾಯಾಲಯದ ವಿಚಾರದಲ್ಲಿ ಹಿಂದೇಟು ಹಾಕುತ್ತಿರುವುದಕ್ಕೆ ಕಾರಣ ತಿಳಿಯದು. ಜನತಾ ನ್ಯಾಯಾಲಯ ನಮ್ಮ ಅಂತಿಮ ಆಯ್ಕೆಯಾಗಬೇಕು. ಪ್ರಖರ ಭಾಷಣದ ಸರಕುಗಳು, ಅಪಪ್ರಚಾರದ ತುಣುಕುಗಳು, ವಯಕ್ತಿಕ ದ್ವೇಷದ ಕೇಸುಗಳು ಜನರನ್ನು ರಂಜಿಸಬಹುದು. ಮತ್ತು ಕೆಲವೊಮ್ಮೆ ಅದೇ ದಿಟವೆಂದು ಜನರು ನಂಬಬಹುದು. ಜನರನ್ನು ಭಾಷಣದಿಂದ ನಂಬಿಸುವುದು ಕಷ್ಟವೇನಲ್ಲ. ಆದರೆ ನ್ಯಾಯಾಲಯ ಹಾಗಲ್ಲ. ಸಾರ್ವಜನಿಕ ಭಾಷಣ, ಅಪಪ್ರಚಾರಗಳು ನ್ಯಾಯಾಲಯದಲ್ಲಿ ಸಾಕ್ಷಿಯಾಗಲಾರದು. ಆರಂಭದಿಂದ ಇಲ್ಲಿಯವರೆಗೂ ಭಾಷಣ, ಮಾಧ್ಯಮ ಪ್ರಚಾರಗಳೇ ಸಹಕಾರಿ ಸಾಕ್ಷರರ ಅಸ್ತ್ರವಾಗಿದೆ ಹೊರತು ವಿಚಾರದ ಹೋರಾಟವಲ್ಲವೆಂಬುದು ವಿಪರ್ಯಾಸ. ಅಪಪ್ರಚಾರದಿಂದ ಜನರನ್ನು ದಾರಿ ತಪ್ಪಿಸಬಹುದು. ಆದರೆ ನ್ಯಾಯಾಲಯದಲ್ಲಿ ಯಾವತ್ತಿಗೂ ಬೇಕಿರುವುದು ದಾಖಲೆಯ ಪುರಾವೆ. ಹಾಗಾಗಿಯೇ ಸಹಕಾರಿ ಸಾಕ್ಷರರಿಗೆ ನ್ಯಾಯಾಲಯ ಅಂತಿಮ ಆಯ್ಕೆ ಆಗಬಹುದೇನೋ ಎನಿಸುತ್ತದೆ. ಕಾದು ನೋಡೋಣ. ಅಂತಿಮವಾಗಿ ಸತ್ಯ ಯಾರ ಪರವಿದೆಯೋ ಅವರು ಗೆಲ್ಲಬೇಕು. ಎಂದಿಗೂ ಅದೇ ನ್ಯಾಯ ಕೂಡ.

Share This
300x250 AD
300x250 AD
300x250 AD
Back to top