Slide
Slide
Slide
previous arrow
next arrow

ಜರ್ಮನಿ ವಿಶ್ವವಿದ್ಯಾಲಯದಿಂದ ನರಸಿಂಹ ಹೆಗಡೆಗೆ ಡಾಕ್ಟರೇಟ್ ಪದವಿ ಪ್ರದಾನ

300x250 AD

ಶಿರಸಿ: ಜರ್ಮನಿಯ ಗ್ರೈಫ್ಸವಾಲ್ಡ್ ವಿಶ್ವ ವಿದ್ಯಾಲಯವು ತಾಲೂಕಿನ ವಾನಳ್ಳಿಯ ನರಸಿಂಹ ಹೆಗಡೆಗೆ ಅರಣ್ಯ ಪರಿಸರ ಮತ್ತು ದಾರ್ಶನಿಕ ಪರಿಸರ ವಿಷಯದಲ್ಲಿ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಈ ವಿಶ್ವ ವಿದ್ಯಾಲಯವು ಪುರಾತನ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದ್ದು, ಇಬ್ಬರು ನೋಬೆಲ್ ಪುರಸ್ಕೃತರಲ್ಲದೇ ಒಬ್ಬರು ಜರ್ಮನ್ ಛಾನ್ಸಲರ್ ಇದೇ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಜಾಗತಿಕವಾಗಿ ಪ್ರಖ್ಯಾತ ವಿಶ್ವ ವಿದ್ಯಾಲಯಗಳಲ್ಲೊಂದಾಗಿದೆ. ಪಶ್ಚಿಮ ಘಟ್ಟದ ಅಪರೂಪದ ಜೌಗು ಪ್ರದೇಶ ರಾಂಪತ್ರೆ ಜಡ್ಡಿ ಕಾಡಿನ ವೈಶಿಷ್ಟ್ಯ, ಪಾರಿಸಾರಿಕ ಮಹತ್ವ, ಇಲ್ಲಿಗಷ್ಟೇ ಅಂತಸ್ಸೀಮಿತವಾದ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಕುರಿತು ಅಧ್ಯಯನ, ದೇವರ ಕಾಡು ಆಗಿರುವಂತಹ ರಾಂಪತ್ರೆ ಜಡ್ಡಿಗಳನ್ನು ಸಾಂಪ್ರದಾಯಕವಾಗಿ ಸ್ಥಾನಿಕ ಜನರು ರಕ್ಷಿಸಿಕೊಂಡು ಬಂದಂತಹ ವಿಧಾನ ಹಾಗೂ ಮುಂದಿನ ದಿನಗಳಲ್ಲಿ ಸಹಭಾಗಿತ್ವದಲ್ಲಿ ಸಂರಕ್ಷಣೆಯ ಮಾರ್ಗೋಪಾಯಗಳನ್ನು ಅಭ್ಯಸಿಸಿ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿ ಎಚ್ ಡಿ ಪದವಿ ನೀಡಲಾಗಿದೆ.
ಫ್ರೊಫೆಸರ್ ಹಾನ್ಸ್ ಯೂಸ್ಟನ್ ಹಾಗೂ ಫ್ರೊಫೆಸರ್ ರಾಫೇಲ್ ಮಾರ್ಗದರ್ಶನದಲ್ಲಿ ಈ ಅಧ್ಯಯನ ನಡೆದಿದೆ.
ನಿರ್ಣಾಯಕರಲೊಬ್ಬರಾದ ಟ್ಯೂಬಿಂಗೆನ್ ವಿಶ್ವ ವಿದ್ಯಾಲಯದ ಫ್ರೊಫೆಸರ್ ಥೋಮಸ ಪೋಥಾಸ್ ಅವರು ಅಧ್ಯಯನವುವು ಅಂತಾರಾಷ್ಟ್ರೀಯ ಮಹತ್ವದ ವಿಷಯಗಳನ್ನೊಳಗೊಂಡಿದ್ದು ತುರ್ತು ಸಂರಕ್ಷಣೆಯಾಗಬೇಕಾದ ಕಾಡಿನ ಕುರಿತು ಅದರ ನಿರ್ವಹಣೆ ಮತ್ತು ಆಡಳಿತಾತ್ಮಕ ಅಂಶಗನ್ನೊಳಗೊಂಡ ಸಮಗ್ರ ಅಧ್ಯಯನವಾಗಿದೆಯೆಂದು ಶ್ಲಾಘಿಸಿದ್ದಾರೆ.
ನರಸಿಂಹ ಹೆಗಡೆ ಈ ಹಿಂದೆ ಎಂ.ಎಸ್ಸಿ (ಕರ್ನಾಟಕ ವಿಶ್ವ ವಿದ್ಯಾಲಯ), ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಪ್ರೊಫೆಶನಲ್ ಮಾಸ್ಟರ್ಸ (ನೆದರ್‌ಲ್ಯಾಂಡ್ ಐ ಟಿ ಸಿ, ಟ್ವೆಂಟೆ ವಿಶ್ವ ವಿದ್ಯಾಲಯ) ಪದವಿ ಪಡೆದಿದ್ದಾರೆ.
ದಶಕಗಳ ಕಾಲ ನರಸಿಂಹ ಹೆಗಡೆ ಈ ತಂಡದ ನೇತೃತ್ವದಲ್ಲಿ, ಬ್ಲೂ ಕಾರ್ಬನ್ ಇಕೊ ಸಿಸ್ಟಮ್ ಎಂದೇ ಗುರುತಿಸಲ್ಪಟ್ಟ ಕಾಂಡ್ಲಾ ಕಾಡುಗಳ ಪಾರಿಸಾರಿಕ ಪುನಶ್ಚೇತನ, ಜಾಗತಿಕ ಹವಾಮಾನ ವೈಪರೀತ್ಯ ತಡೆಗೆ ಪ್ರಯತ್ನ, ಆರ್ಥಿಕ ಹಾಗೂ ಅಭಿವೃದ್ಧಿ ಮಾದರಿಯಲ್ಲಿ ಧನಾತ್ಮಕ ಬದಲಾವಣೆಯನ್ನು ತಳಮಟ್ಟದಿಂದ ಹಿಡಿದು ನೀತಿ ನಿರೂಪಕರವರೆಗೆ ಕೊಂಡೊಯ್ದದ್ದು ಹಾಗೂ ಇವು ಭೂಗೃಹ ಎದುರಿಸುತ್ತಿರುವ ಸವಾಲು ಎದುರಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಪೂರಕ ಅಂಶಗಳನ್ನು ಪರಿಗಣಿಸಿ ವಿಶ್ವಸಂಸ್ಥೆ ಸ್ನೇಹಕುಂಜಕ್ಕೆ ಈಕ್ವೆಟರ್ ೨೦೨೧ ಪ್ರಶಸ್ತಿ ನೀಡಿ ಗೌರವಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ.
ಇದಲ್ಲದೇ ನರಸಿಂಹ ಹೆಗಡೆಯವರು ವಿಶ್ವದ ಬೃಹತ್ ನೀರಾವರಿ ಯೋಜನೆ ಬಾಗಲಕೋಟೆ ರಾಂಥಲ್ ನ ಪರಿಣಾಮಗಳ ಅಧ್ಯಯನದ ವಿಶ್ವ ಬ್ಯಾಂಕ್ ತಂಡದ ನೇತೃತ್ವವನ್ನೂ ವಹಿಸಿದ್ದಾರೆ. ಜಗತ್ತಿನ ಅತಿ ದೊಡ್ಡ ಕಾಂಡ್ಲಾ ಕಾಡು ಸುಂದರಬನದಲ್ಲಿಯೂ ಸಹ ಪ್ರಕಲ್ಪದ ಫಲಶೃತಿ ಅಧ್ಯಯನ ನಡೆಸಿದ್ದಾರೆ. ಸ್ಥಾನಿಕ ಜನರೊಟ್ಟಿಗೆ ಕಾಡಿನ ಉಪವನ ಉತ್ಪನ್ನಗಳ ಮೌಲ್ಯ ವರ್ಧನೆಗೆ ಪ್ರಯತ್ನ, ಬಯೋಚಾರ್ ರಾಷ್ಟ್ರೀಯ ಸಂಘಟನೆಗೆ ಸೆಕ್ರೆಟರಿಯೇಟ್ ಆಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.
ಪಶ್ಚಿಮಘಟ್ಟದ ಅಪರೂಪದ ಕಾಡಿನ ಪಾರಿಸಾರಿಕ ಪುನಶ್ಚೇತನ, ಅವಿನಾಶಿ ಸಸ್ಯ ಪ್ರಬೇಧಗಳ ಸಂರಕ್ಷಣೆ, ಜನ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆಗೆ ಪ್ರಯತ್ನ. ಕಾಂಡ್ಲಾ ಕಾಡುಗಳ ರಕ್ಷಣೆ, ಮಣ್ಣಿನ ಸಾವಯವ ಇಂಗಾಲ ಅಭಿವೃದ್ಧಿ ಹಾಗೂ ಗಜನಿ ಭೂಮಿಯ ಮಾಲೀಕರುಗಳಿಗೆ ಇಂಗಾಲ ಶೇಖರಣೆಯ ಹಣಕಾಸಿನ ಲಾಭ ದೊರಕಿಸುವ ಮೊದಲ ಪ್ರಯತ್ನ ಮಾಡಿರುತ್ತಾರೆ.
ಅಮೇರಿಕಾದ ಯೂ.ಎಸ್.ಏಡ್, ಟೆಟ್ರಾ ಟೆಕ್ ಆರ್ಡ, ರೋಮ್ ನ ಬಯೋವರ್ಸಿಟಿ ಇಂಟರ್ ನ್ಯಾಶನಲ್, ಜರ್ಮನಿಯ ಜಿ ಎಫ್ ಎ ಬ್ರಿಡ್ಜಸ್, ದೆಹಲಿಯ ಟಿಟಿಸಿ, ಈ ವಿ ಐ, ಕೋಶರ್ ಕ್ಲೈಮೇಟ್ ಮುಂತಾದವುಗಳಲ್ಲಿ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದು, ಕಳೆದ ಏಳು ವರ್ಷಗಳಿಂದ ಕಾಸರಕೋಡಿನ ಸ್ನೇಹಕುಂಜ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ.
ಪಂ. ಪ್ರವೀಣ ಗೋಡಖಿಂಡಿ ಹಾಗೂ ಪಂ. ಎಂ.ಪಿ.ಹೆಗಡೆ ಪಡಿಗೆರೆ ಅವರಲ್ಲಿ ಕೊಳಲುವಾದನದ ಅಧ್ಯಯನ ನಡೆಸಿದ್ದು, ಶಿರಸಿಯಲ್ಲಿ ಅನುಶೃತ ಕೊಳಲು ಅಭ್ಯಾಸ ಕೇಂದ್ರ ನಡೆಸುತ್ತಿದ್ದಾರೆ. ಸಸ್ಟೇನೇಬಲ್ ಫಾರೆಸ್ಟ್ರಿ ಮತ್ತು ಇಕೋಲಾಜಿಕಲ್ ಪ್ರೋಸೆಸ್ ಜರ್ನಲ್ ಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top