Slide
Slide
Slide
previous arrow
next arrow

ಸಿಪಿ ಬಝಾರ್ ಸೂಪರ್ ಮಾರ್ಕೆಟ್ ಮುಚ್ಚಿದರೆ ಲಾಭ ಯಾರಿಗೆ ?

300x250 AD

ಸಂಶಯಕ್ಕೆ ಎಡೆಮಾಡಿಕೊಟ್ಟ ಸಹಕಾರಿ ಸಾಕ್ಷರರ ನಡೆ | ಉಂಡಮನೆಗೆ ದ್ರೋಹ ಬಗೆಯುವುದು ಥರವಲ್ಲವೆಂದ ಸದಸ್ಯರು

ಗೋಪಿಕೃಷ್ಣ🖋

ಒಂದು ಅಡಿಕೆ ಸಸಿ ನಾಟಿಮಾಡಿ, ಅವಶ್ಯವಿರುವಷ್ಟು ಮಣ್ಣು ಗೊಬ್ಬರ ಹಾಕಿ ಬೇಕಾದಷ್ಟು ನೀರಾವರಿ ವ್ಯವಸ್ಥೆ ಮಾಡಿದರೂ ಸಹ ಕನಿಷ್ಟವೆಂದರೆ 6 ನೇ ವರ್ಷದಲ್ಲಿ ಫಲ ನೀಡಲು ಆರಂಭ ಮಾಡಿ, 8-10ನೇ ವರ್ಷಕ್ಕೆ ಗಟ್ಟಿ ಫಸಲು ನೀಡಲು ಶುರುವಾಗುತ್ತದೆ. ಇನ್ನು ಗೊಬ್ಬರ ಜಾಸ್ತಿ ಬಳಕೆ ಮಾಡಿದರೆ ಒಂದು ವರ್ಷ ಬೇಗನೇ ಫಸಲು ಬರುತ್ತದೆ. ಇದು ಅಡಿಕೆಯ ವಿಷಯದಲ್ಲಿ ಸಾಮಾನ್ಯ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅಡಿಕೆ ಬೆಳೆಯುವುದು ಒಂದು ಕೃಷಿ. ಉದ್ಯಮವಲ್ಲ. ಆದರೆ ಉದ್ಯಮದಲ್ಲಿಯೂ ಹಾಗೆಯೇ. ಯಾವುದೇ ಉದ್ಯಮವಾದರೂ ಸರಿ. ಪ್ರಾರಂಭದ ದಿನದಿಂದನೇ ಲಾಭ ಬೇಕೆನ್ನುವುದು ವಿಚಾರ ಸರಿಯಾದರೂ ಹೂಡಿಕೆ, ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಪರಿಗಣಿಸಿದಾಗ ಅದು ಕಷ್ಟಸಾಧ್ಯವಾದೀತು. ಅದರಲ್ಲಿಯೂ ಕೋಟಿಗಟ್ಟಲೇ ಇನ್ವೆಸ್ಟ್ ಮಾಡಿ, ಒಂದು ಹೊಸ ವ್ಯವಸ್ಥೆ ಮಾಡಿದಾಗ ಮೊದಲ ದಿನದಿಂದಲೇ ಲಾಭದಲ್ಲಿ ನಡೆಯಬೇಕು ಎಂಬುದು ಉದ್ಯಮಿಗಳ ಅಥವಾ ಮಾರುಕಟ್ಟೆ ತಿಳಿದವರ ಲಕ್ಷಣವಲ್ಲ. ಅದು ಬುದ್ಧಿವಂತ ಅನ್ಪಡ್ ಗಳ ಮೂಲಭೂತ ಲಕ್ಷಣ ಎಂದರೆ ತಪ್ಪಾಗಲಾರದು.

ಹಿರಿಯ ಸಹಕಾರಿ ದಿವಂಗತ ಕಡವೆ ಶ್ರೀಪಾದ ಹೆಗಡೆಯವರ ದೂರದೃಷ್ಟಿ ವಿಚಾರ ಎಷ್ಟಿತ್ತೆಂಬುದು ಅವರ ಅಂದಿನ ನಿರ್ಧಾರದಿಂದ ಅರಿಯಬೇಕು. ನಮಾಜ್ ಗುಡ್ಡವೆಂದೇ ಬಾಯ್ಮಾತಾಗಿದ್ದ ಬೋಳುಗುಡ್ಡದಲ್ಲಿ ಈಗಿನ ಟಿಎಸ್ಎಸ್ ಅನ್ನು ತಂದು, ಸತತ ಶ್ರಮ ವಹಿಸಿದ ಕಾರಣ ಇಂದು ಆ ಭಾಗದಲ್ಲಿ ಎಪಿಎಂಸಿಯೂ ಬರುವಂತಾಯಿತು. ಇಲ್ಯಾರು ಜನ ಬರುತ್ತಾರೆ ಎಂದು ಅವರು ಯೋಚಿಸಿದ್ದರೆ ಈಗಲೂ ಸಿಪಿ ಬಝಾರಿನಲ್ಲಿಯೇ ಟಿಎಸ್ಎಸ್ ಇರುತ್ತಿತ್ತೇನೋ. ಇನ್ನು ಶಿರಸಿಯ ಸಿಪಿ ಬಝಾರಿನಲ್ಲಿಯ ಸೂಪರ್ ಮಾರ್ಕೆಟ್ ವಿಷಯಕ್ಕೆ ಬಂದರೆ ಸೂಪರ್ ಮಾರ್ಕೆಟ್ ಆರಂಭಗೊಂಡು ಸುಮಾರು ಒಂದೂವರೆ ವರ್ಷದೊಳಗೆ ನಷ್ಟದ ಹೆಸರಿನಲ್ಲಿ ಸಹಕಾರಿ ಸಾಕ್ಷರರು ಅದನ್ನು ಮುಚ್ಚಿದ್ದಾರೆ. ಅದರಲ್ಲಿಯೂ ತಾವು ಆಡಳಿತಕ್ಕೆ ಬಂದ ಮೊದಲ ತಿಂಗಳಲ್ಲಿಯೇ ಸಿಪಿ ಬಝಾರ್ ಸೂಪರ್ ಮಾರ್ಕೆಟ್ ನಷ್ಟವೆಂದು ಘೋಷಣೆ ಮಾಡಾಗಿತ್ತು. ಆ ಮೂಲಕ ತಾವು ಆಡಳಿತಕ್ಕೇರಲು ಎಲ್ಲ ರೀತಿಯ ಸಹಾಯಗಳನ್ನು ಮಾಡಿದ್ದ ಸಹಕಾರಿ ವ್ಯವಸ್ಥೆಯ ಹೊರಗಿನವರಿಗೆ ಋಣಸಂದಾಯ ಮಾಡುವ ಮಾತು ನಡೆಸಿಕೊಟ್ಟಿದ್ದು ಯಾರಿಗೂ ತಿಳಿಯದ ವಿಚಾರವೇನಲ್ಲ. ಇದು ಕೇವಲ ಇಲ್ಲಿಗೆ ಮುಗಿಯುವಂಥದ್ದಲ್ಲ. ತಮಗೆ ಕಹಿಯಾದ ಸೂಪರ್ ಮಾರ್ಟ್ ಎಂಬ ಔಷಧಿ ಬಂದ್ ಮಾಡಿಸಲು ನಕಲಿ ವೈದ್ಯರಿಗೆ (ಡಾಕ್ಟರ್) ಕೊಟ್ಟ ಕೋಟಿಯ ಋಣ ? ಇನ್ನೂ ತೀರಿದಂತೆ ಕಾಣುವುದಿಲ್ಲವೆಂಬುದು ಸದಸ್ಯರೊಬ್ಬರ ಅಭಿಪ್ರಾಯ.

ಆರಂಭದಲ್ಲಿ ನಷ್ಟದಿಂದ ಲಾಭಕ್ಕೇರಿದ ದಂದೆ:
ಈಗೊಂದು ದಶಕಗಳ ಹಿಂದೆ ಸಂಸ್ಥೆಯು ಅಡಿಕೆ ಟ್ರೇಡಿಂಗ್ ಪ್ರಾರಂಭಿಸಿದಾಗ ಸತತ ಎರಡು ವರ್ಷಗಳ ಕಾಲ ನಷ್ಟವನ್ನು ಅನುಭವಿಸಿತ್ತು. ಆದರೆ ಸಂಸ್ಥೆಯ ಸದಸ್ಯರ ಹಿತ ಮತ್ತು ದೂರದೃಷ್ಟಿಯ ಫಲವಾಗಿ ಅಡಿಕೆ ಟ್ರೇಡಿಂಗ್ ಮುಂದುವರೆಸಿದ ಪರಿಣಾಮ ಇಂದು ಸಂಸ್ಥೆ ಅಡಿಕೆ ಟ್ರೇಡಿಂಗ್ ನಿಂದ ಹಲವಾರು ಕೋಟಿಗಳ ಲಾಭ ಕಾಣುತ್ತಿದೆ. ಅದಕ್ಕಿಂತ ಹೆಚ್ಚಾಗಿ ಸದಸ್ಯ ರೈತರಿಗೆ ಭದ್ರತೆಯನ್ನು ಒದಗಿಸಿದೆ. ಒಂದು ಸಹಕಾರಿ ಸಂಸ್ಥೆ ಮಾಡಬೇಕಿದ್ದು ಇಂತವುಗಳನ್ನು. ನಂತರದಲ್ಲಿ ಟಿಎಸ್ಎಸ್ ಸುಫಾರಿ ಪ್ರಾರಂಭಿಸಿದಾಗಲೂ ಸಹ ಆರಂಭದ ಕೆಲವು ವರ್ಷಗಳಲ್ಲಿ ನಷ್ಟವನ್ನು ಅನುಭವಿಸಿತ್ತು. ಆದರೆ ಮಾರುಕಟ್ಟೆ ಅಧ್ಯಯನ, ವ್ಯವಹಾರದಲ್ಲಿನ ಹಿಡಿತ, ವೆಚ್ಚದ ಕಡಿತದ ಪರಿಣಾಮವಾಗಿ ಕೆಲವೇ ವರ್ಷಗಳಲ್ಲಿ ಲಾಭದ ದಂದೆಯಾಗಿ ಸಂಸ್ಥೆಯ ಕೈ ಹಿಡಿದಿತ್ತು. ಇನ್ನು ಈಗಿನ ಎಪಿಎಂಸಿ ಆವರಣದಲ್ಲಿ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯುತ್ತಿರುವ ಸೂಪರ್ ಮಾರ್ಕೆಟ್ ವ್ಯವಹಾರದ ಕುರಿತಾಗಂತೂ ಸದಸ್ಯರಿಗೆ ತಿಳಿದೇ ಇದೆ. ಅದನ್ನು ಬಂದ್ ಮಾಡಿಸಲು ಅನೇಕರು ಪಟ್ಟ ಶ್ರಮದಲ್ಲಿ, ವ್ಯಯಿಸಿದ ಹಣದಲ್ಲಿ ತಾವೇ ಒಂದು ಮಾರ್ಕೆಟ್ ಪ್ರಾರಂಭ ಮಾಡಬಹುದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕೋರ್ಟಲ್ಲಿ ಇಂದಿಗೂ ಕೇಸ್ ಜೀವಂತವಿರಬೇಕು ಎನಿಸುತ್ತದೆ. ಆದರೆ ಸಂಸ್ಥೆಯ ಪ್ರಾರಬ್ಧ ನೋಡಿ. ಹೊರಗಿನವರೊಂದಿಗೆ ಹೋರಾಡಿ ಗೆಲ್ಲಬಹುದು, ಆದರೆ ಈಗ ಒಳಹೊಕ್ಕವರಿಂದಲೇ ಇನ್ನೆರಡು ವರ್ಷದಲ್ಲಿ ಇವರು ಅಧಿಕಾರದಲ್ಲಿ ಇದ್ದರೆ ಇದನ್ನೂ ಮುಚ್ಚಿ ಕೋಟಿ ಋಣದ ಸಂದಾಯ ಮಾಡಿದರೆ ಆಶ್ಚರ್ಯವಿಲ್ಲ ? ಎಂಬುದು ಎಪಿಎಂಸಿ ಯಾರ್ಡ್ ನ ಪಡಸಾಲೆಯಲ್ಲಿ ಸದಸ್ಯರ ಬಾಯಿಯಿಂದಲೇ ಕೇಳಿ ಬರುತ್ತಿರುವ ಮಾತಾಗಿದೆ.

ಇವರ ಆಡಳಿತದಲ್ಲಿ ಒಂದು ವರ್ಷದ ಪ್ರಗತಿ ಪತ್ರಿಕೆ ನೋಡಿಯಾದರೂ ಮುಚ್ಚಬಹುದಿತ್ತು !

300x250 AD

ಸಿಪಿ ಬಝಾರ್ ನ ಸೂಪರ್ ಮಾರ್ಕೆಟ್ ನಷ್ಟದಲ್ಲಿದೆ ಎಂದು ಅಧಿಕಾರಕ್ಕೆ ಬಂದ ಸಹಕಾರಿ ಸಾಕ್ಷರರು ಆರಂಭದಲ್ಲಿಯೇ ಘೋಷಿಸಿ, ಅದನ್ನು ಮುಚ್ಚುವ ವ್ಯವಸ್ಥೆ ಮಾಡಾಗಿತ್ತು. ಸೂಪರ್ ಮಾರ್ಕೆಟಿನಲ್ಲಿ ವ್ಯಾಪಾರಿ ಲಾಭವಂತೂ ಇದ್ದೇ ಇತ್ತು. ಅಧಿಕ ಇನ್ವೆಸ್ಟ್ಮೆಂಟ್ ಕಾರಣಕ್ಕೆ ಆರಂಭದಲ್ಲಿಯೇ ಲಾಭಕ್ಕೆ ಬರಲು ಕಷ್ಟಸಾಧ್ಯ. ಆದರೆ ಮೂರ್ನಾಲ್ಕು ವರ್ಷದಲ್ಲಾದರೂ ಲಾಭಕ್ಕೆ ಮರಳುವ ಸಾಧ್ಯತೆಯಿತ್ತು. ಸಹಕಾರಿ ಸಾಕ್ಷರರಿಗೆ ಸಂಸ್ಥೆಯ ಸೂಪರ್ ಮಾರ್ಕೆಟ್ ಲಾಭಕ್ಕೆ ತರುವುದಕ್ಕಿಂತ, ಮುಚ್ಚಿದರೇ ಅಧಿಕ ಲಾಭವಿದ್ದಂತೆ ಕಾಣುತ್ತದೆ. ಇದಕ್ಕೆ ಸ್ವಯಂ ಸಾಕ್ಷರರೇ ಉತ್ತರಿಸಬೇಕು. ತಮ್ಮ ಆಡಳಿತದಲ್ಲಿ ಕನಿಷ್ಠ ಒಂದು ವರ್ಷವಾದರೂ ಸೂಪರ್ ಮಾರ್ಕೆಟ್ ನಡೆಸಿ, ಅಲ್ಲಿಯ ವ್ಯವಹಾರ, ಜನಸಂದಣಿ ಇನ್ನಿತರ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ನಂತರದಲ್ಲಿ ನಿರ್ಧಾರಕ್ಕೆ ಬರುವುದು ಸರಿಯಾದ ಹಾದಿಯಾಗಿತ್ತು. ಆದರೆ ಇವರ ನಡೆ ನೋಡಿದರೆ ಸಂಸ್ಥೆಯ ಪ್ರಗತಿಗಿಂತ ನಷ್ಟದ ಹೆಸರಿನಲ್ಲಿ ಮುಚ್ಚುವ ಕಾಯಕವನ್ನೇ ಮಾಡುತ್ತಿರುವುದು ಅಭಿವೃದ್ಧಿ ಪೂರಕ ಯೋಚನೆಯಲ್ಲ. ಸಿಪಿ ಬಝಾರಿನದ್ದು ಒಮ್ಮೆಲೆ ಇವರೇ ನಷ್ಟವೆಂದು ಬಂದ್ ಮಾಡುವ ಮೂಲಕ ಕೋಟಿ ಋಣ ಸಂದಾಯವೇ ? ಪ್ರಧಾನ ಅಜೆಂಡಾವಾದಂತೆ ಕಾಣುತ್ತದೆ ಎಂಬುದು ಸಂಸ್ಥೆಯ ಬಹುತೇಕರ ವಾದ.

ಹಿಂದಿನ ಆಡಳಿತ ಮಂಡಳಿಯವರು ಮಾಡಿದ್ದೆಲ್ಲದೂ ತಪ್ಪೆಂಬುದು ಈಗಿನವರ ಲಾಜಿಕ್. ಇಂತಹ ಪೂರ್ವಾಗ್ರಹದಿಂದ ಅಧಿಕಾರಕ್ಕೆ ಬಂದಾಗ ಅದನ್ನೇ ಮುಂದುವರೆಸಿಕೊಂಡು ತಪ್ಪು. ವಾಸ್ತವಿಕತೆಗೆ ಸ್ವಲ್ಪವಾದರೂ ಬರುವ ಪ್ರಯತ್ನ ಮಾಡುವ ಮೂಲಕ‌ ಸದಸ್ಯರಿಗೆ ಅವಶ್ಯವಿರುವ ಸೇವೆ ನೀಡಿ,‌ಸಂಸ್ಥೆಯ ಅಭಿವೃದ್ಧಿ ಮಾಡಬೇಕು. – ಸುಬ್ರಹ್ಮಣ್ಯ ಹೆಗಡೆ ಬಾಳೆಕೊಪ್ಪ

ಕುಮಟಾ ರಸ್ತೆ-ಸಿದ್ದಾಪುರ ರಸ್ತೆ-ಮತ್ತೀಘಟ್ಟಾ ರಸ್ತೆಗಳ ಸಂಘದ ಸದಸ್ಯರಿಗೆ ಮತ್ತು ನಗರದ ಕೇಂದ್ರಭಾಗದ ಜನರಿಗೆ ಸಿಪಿ ಬಝಾರ್ ಸೂಪರ್ ಮಾರ್ಕೆಟ್ ಅನುಕೂಲವಾಗುತ್ತಿತ್ತು. ಸಾಗಾಣಿಕೆ, ಜನದಟ್ಟನೆ ಎಲ್ಲ ರೀತಿಯಿಂದಲೂ ಸದಸ್ಯರಿಗೆ ಹೆಚ್ಚು ಉಪಯೋಗವಾಗಿದ್ದ ಸೂಪರ್ ಮಾರ್ಟ್ ಅನ್ನು ಆರಂಭದಲ್ಲಿಯೇ ಮುಚ್ಚಿರುವ ಈಗಿನ ಆಡಳಿತ ಮಂಡಳಿಯ ಉದ್ಧೇಶವೇ ತಿಳಿಯುತ್ತಿಲ್ಲ. ಇದರ ನೈಜ ಹಿನ್ನಲೆ ಸದಸ್ಯರಿಗೆ ತಿಳಿಯುವಂತಾಗಬೇಕು.– ಜಿ. ಆರ್. ಹೆಗಡೆ, ಅಮ್ಮೀನಳ್ಳಿ, ಟಿಎಸ್ಎಸ್ ಶೇರು ಸದಸ್ಯ

Share This
300x250 AD
300x250 AD
300x250 AD
Back to top