ಕಾರವಾರ: ರಾಮ ಮಂದಿರ ಪೂರ್ಣ ಮುಗಿಯದೆ ಉದ್ಘಾಟನೆ ಮಾಡಿದರು. ಕಾರ್ಕಳದಲ್ಲಿ ಪರುಶುರಾಮ ಮೂರ್ತಿ ನಿರ್ಮಾಣದಲ್ಲಿ ಬಿಜೆಪಿ ದ್ರೋಹ ಎಸಗಿತು. ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತುವುದೇ ಬಿಜೆಪಿ ಕೆಲಸವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಟೀಕಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯ ಬಿಜೆಪಿಯ ಮಾಜಿ ಸಂಸದ 30 ವರ್ಷ ಕೆಲಸ ಮಾಡಲಿಲ್ಲ . ಈಗಿನ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ 30 ವರ್ಷ ರಾಜಕೀಯ ಮಾಡಿದ್ದಾರೆ. ಆದರೆ ಇವರೂ ಕೆಲಸ ಮಾಡಲಿಲ್ಲ. ಕಸ್ತೂರಿ ರಂಗನ್ ವರದಿ ಬಗ್ಗೆ ಕಾಗೇರಿ ತಮ್ಮ ನಿಲುವನ್ನು ಈತನಕ ಹೇಳಿಲ್ಲ. ಕರಾವಳಿ ಜಿಲ್ಲೆಗೆ ಮಂತ್ರಿಯಾಗಿದ್ದಾಗ ಕಾಗೇರಿ ಏನೂ ಮಾಡಲಿಲ್ಲ ಎಂದರು.
400 ಸೀಟು ಎಂದು ಬಿಜೆಪಿ ಹೇಳುತ್ತಿದೆ. ಆದರೆ ತನ್ನ 100 ಜನ ಎಂಪಿಗಳಿಗೆ ಸೀಟೇ ಕೊಡಲಿಲ್ಲ. ಅವರನ್ನು ಯಾಕೆ ಬದಲಿಸಿದರು? ಎಂದು ಪ್ರಶ್ನಿಸಿದರು. ಗ್ಯಾರಂಟಿ ಜಾರಿಯಾದರೆ ತಲೆ ಬೋಳಿಸಿಕೊಂಡು ವಿಧಾನಸೌಧದ ಮುಂದೆ ಕುಳಿತುಕೊಳ್ಳುವೆ ಅಂದಿದ್ದ ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷರಿಗೆ ಬ್ಲೇಡ್ ಕಳಿಸಿಕೊಟ್ಟಿದ್ದೇವೆ. ಬಿಜೆಪಿ ಐಟಿ, ಇಡಿ ಮುಖಾಂತರ ವಿರೋಧ ಪಕ್ಷವನ್ನು ಹೆಣೆಯುತ್ತಿದೆ. ಬಾಂಡ್ ಮೂಲಕ ಭ್ರಷ್ಟಾಚಾರ ಮಾಡಿದೆ. ಶಾಸಕರನ್ನು ಖರೀದಿ ಮಾಡುವ ಪರಂಪರೆಯನ್ನು ಬಿಜೆಪಿ ಆರಂಭಿಸಿ, ದೇಶದಲ್ಲಿ 416 ಶಾಸಕರನ್ನು ಖರೀದಿಸಿತು. ಆ ಮೂಲಕ ತನ್ನ ವಿರೋಧಿ ಪಕ್ಷಗಳ ಸರ್ಕಾರಗಳನ್ನು ಬೀಳಿಸಿತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ 128 ಲಕ್ಷ ಕೋಟಿ ಸಾಲವನ್ನು ಮಾಡಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಚುನಾವಣೆ ಮುಗಿಸಿವೆ . ಹಾಸನ, ಬೆಂಗಳೂರು ಗ್ರಾಮೀಣ, ಹಾಸನ, ಮಂಡ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಗೆದ್ದರೆ ಜೆಡಿಎಸ್ ನಾಮಾವಶೇಷ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣವಿದ್ದು, ಗ್ಯಾರಂಟಿ ಕಾರ್ಡ್ ಮನೆ ಮನೆ ತಲುಪಿದೆ. ಹಾಗಾಗಿ ಜನ ನಮ್ಮ ಪರ ಇದ್ದಾರೆ. ಗ್ಯಾರಂಟಿಯಿಂದ ಬಿಜೆಪಿಯ 15% ಓಟು ನಮಗೆ ಬರಲಿದೆ. ಭಾರತ್ ಜೋಡೋದಲ್ಲಿ ರಾಹುಲ್ ಜನರ ಬೇಗುದಿ ಕಂಡಿದ್ದರು. ಅದನ್ನು ಆಧರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಮಹಿಳೆಯರಿಗೆ ೧ ಲಕ್ಷ, ರೈತರ ಸಾಲ ಮನ್ನಾ , ಯುವಕರಿಗೆ ಉದ್ಯೋಗ ಪೂರಕ ತರಬೇತಿ ಕೊಡುತ್ತೇವೆಂದು ಹೇಳಿದ್ದೇವೆ ಎಂದರು.
ಕೇಂದ್ರದ ಬಿಜೆಪಿ ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ. ಇದರಿಂದ 772 ಜನ ರೈತರು ಸಾವನ್ನಪ್ಪಿದರು. ಕೇಂದ್ರದ ಮಂತ್ರಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹತ್ತಿಸಿದ. ಇಂತಹ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೆಣಸುತ್ತಿದೆ. ಜಿಎಸ್ ಟಿ ಮರುಪರಿಶೀಲನೆ, ಆರೋಗ್ಯ ವಿಮೆ, ಆಶಾ ಕಾರ್ಯಕರ್ತರ ವೇತನ ಹೆಚ್ಚಳ,ಕಾರ್ಮಿಕರ ಹಿತ ಕಾಯುವ ಭರವಸೆ ಕಾಂಗ್ರೆಸ್ ನೀಡಿದೆ. ಕರ್ನಾಟಕಕ್ಕೆ ನೀರಾವರಿ ಯೋಜನೆ ಮತ್ತು ಅನುದಾನ ನೀಡುವಲ್ಲಿ ಕೇಂದ್ರದ ಬಿಜೆಪಿ ಅನ್ಯಾಯ ಮಾಡಿತು ಎಂದು ವಾಗ್ದಾಳಿ ನಡೆಸಿದರು.
ವಕ್ತಾರ ಶಂಭು ಶೆಟ್ಟಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ರವಿಂದ್ರ ನಾಯ್ಕ, ತಾಲೂಕು ಅಧ್ಯಕ್ಷ ಜಿ.ಪಿ.ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಬಾಕ್ಸ್
ಡಾ.ಅಂಜಲಿಗೆ ಮತ ನೀಡಿ…
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿದ್ಯಾವಂತೆ, ಜನರ ಜೊತೆ ಬೆರೆಯುತ್ತಾರೆ. ಅವರನ್ನು ಗೆಲ್ಲಿಸಿ ಎಂದು ವಿನಯಕುಮಾರ್ ಸೊರಕೆ ಮನವಿ ಮಾಡಿದರು.
ಕೇಂದ್ರದಲ್ಲಿ ಈ ಸಲ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ಹಿಂದೆ ಬಿಜೆಪಿಯ ಎಲ್ಲಾ ನಾಯಕರು ಸಾಮೂಹಿಕವಾಗಿ ಬಿಜೆಪಿಗೆ ಮತ ಕೇಳುತ್ತಿದ್ದರು. ಈಗ ಮೋದಿಗೆ ಓಟು ಕೇಳುತ್ತಿದ್ದಾರೆ. ಹಾಗಾದರೆ ಸಂಸದರಿಗೆ ಮುಖ ಇಲ್ಲವೇ ಎಂದು ಪ್ರಶ್ನಿಸಿದರು. ಶೇ.80 ರಷ್ಟು ಮಿಡಿಯಾವನ್ನು ಸಹ ಬಿಜೆಪಿ ಅಂಬಾನಿ ಮೂಲಕ ನಿಯಂತ್ರಿಸುತ್ತಿದೆ. ಆದರೆ ಜನರನ್ನು ಖರೀದಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದರು.
ನಾನು ಸಂಸದನಾಗಿದ್ದಾಗ, ಮಾರ್ಗರೆಟ್ ಆಳ್ವಾ ಸಂಸದೆಯಾಗಿದ್ದಾಗ 32000 ಜನರಿಗೆ ಹಕ್ಕುಪತ್ರ ಸಿಕ್ಕಿದೆ ಎಂದು ನೆನಪಿಸಿಕೊಂಡರು.