Slide
Slide
Slide
previous arrow
next arrow

‘ಪರಂಪರೆಯ‌ ಮೂಲಕ ವಿಶ್ವಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟ ಕೀರ್ತಿ ಬಸವಣ್ಣನವರದ್ದು’

300x250 AD

ಸಿದ್ದಾಪುರ: ಬಸವಣ್ಣನವರು ತಮ್ಮ ಪರಂಪರೆಯ ಮೂಲಕ ವಿಶ್ವಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು. ನಾಡನ್ನು ಪ್ರಜ್ಞಾವಂತ ನಾಡನ್ನಾಗಿಸಿದವರು ಬಸವಣ್ಣ ಎಂದು ಚಿಕ್ಕಮಗಳೂರು ಬಸವತತ್ವಪೀಠ, ಶಿವಮೊಗ್ಗ ಬಸವಕೇಂದ್ರದ ಡಾ|ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ಹೆರವಳ್ಳಿಯ ಶ್ರೀ ಮಡಿವಾಳ ಮಾಚಿದೇವ ಮಂದಿರದ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಿದ ವಿವಿಧ ಸಮುದಾಯಗಳ ಸ್ವಾಮಿಜೀಗಳ ಸಾನಿಧ್ಯದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ಸಮುದಾಯದ ಸಂಘಟನೆ ಸುಲಭವಲ್ಲ. ಧರ್ಮದ ಜೊತೆಗೆ ಇನ್ನಿತರ ಸಂಗತಿಗಳೂ ತಳಕುಹಾಕಿಕೊಂಡಿರುತ್ತವೆ. ಅವೆಲ್ಲವನ್ನೂ ಒಗ್ಗೂಡಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಡಾ|ಬಸವ ಮಾಚಿದೇವ ಸ್ವಾಮಿಗಳು ಕಾರ್ಯನಿರ್ವಹಿಸುತ್ತಿರುವದು ಅತ್ಯಂತ ಮಹತ್ವದ್ದು ಎಂದರು.

ಮುದ್ದೇಬೀಹಾಳದ ತಂಗಡಗಿ ಶ್ರೀ ಅಣ್ಣಪ್ಪದೇವರ ಮಹಾಸಂಸ್ಥಾನದ ಜಗದ್ಗುರು ಶ್ರೀ ಅನ್ನದಾನ ಭಾರತಿ ಅಣ್ಣಪ್ಪ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಶ್ರೀ ಬಸವಣ್ಣನವರಿಗೆ ಬೆಂಬಲವಾಗಿ ನಿಂತು ಧರ್ಮಕ್ಕಾಗಿ ಶ್ರಮಿಸಿದವರು ಶ್ರೀ ಮಾಚಿದೇವ ಸ್ವಾಮಿಗಳು. ಜಾತಿಯ ಕಟ್ಟುಗಳಿಗೆ ಬೀಳದೇ ಸಮಾಜಕ್ಕೆ ಹೊಸದಿಕ್ಕನ್ನು ತೋರಿದವರು ಎಂದರು.
ತೀರ್ಥಹಳ್ಳಿ ನಿಟ್ಟೂರಿನ ಶ್ರೀ ಬ್ರಹ್ಮನಾರಾಯಣ ಗುರುಮಠದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸಮಾಜಕ್ಕೆ ದಾರಿದೀಪವಾದ ವಿಚಾರಗಳನ್ನು ನೀಡಿದವರು ಮಡಿವಾಳ ಮಾಚಿದೇವರು. ಆ ನಿಟ್ಟಿನಲ್ಲಿ ಡಾ|ಬಸವ ಮಾಚಿದೇವ ಸ್ವಾಮಿಗಳು ಮತ್ತಷ್ಟು ವಿಶಾಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

300x250 AD

ಶಿರಸಿಯ ಶ್ರೀ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ನೀಡಿ ತೊಡುವ ಹೊರಬಟ್ಟೆಯ ಮಡಿಯ ಜೊತೆಗೆ ಬದುಕಿನ ಬಟ್ಟೆಯನ್ನು ಹಸನು ಮಾಡಿಕೊಳ್ಳುವ ಕ್ರಮವನ್ನು ತೋರಿಸಿದವರು ಶ್ರೀ ಮಡಿವಾಳ ಮಾಚಿದೇವರು. ಚಿಕ್ಕ ಸಮಾಜವಾದರೂ ಹೃದಯಶ್ರೀಮಂತಿಕೆಯಲ್ಲಿ ದೊಡ್ಡ ಸಮಾಜ ಅಗಸರದ್ದು. ಬದುಕಿಗೆ ಅಧ್ಯಾತ್ಮವನ್ನು ಕಲಿಸಿಕೊಟ್ಟ ಶ್ರೀ ಮಾಚಿದೇವರ ಉದ್ದೇಶವನ್ನು ಡಾ|ಬಸವ ಮಾಚಿದೇವ ಸ್ವಾಮಿಗಳು ಅನುಸರಿಸಿ,ಕಳೆದ 10 ವರ್ಷಗಳಲ್ಲಿ ಕಿರು ಸಮಾಜವನ್ನು ಸಂಸ್ಕಾರಯುಕ್ತವಾಗಿ ಅಣಿಗೊಳಿಸುತ್ತಿದ್ದಾರೆ ಎಂದರು.
ಅಥಣಿ ತೆಲಸಂಘದ ಶ್ರೀ ಕುಂಬಾರ ಗುರುಪೀಠದ ಜ| ಶ್ರೀ ಬಸವ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು, ಕೊರಟಗೆರೆ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಬಸವ ಮಹಾಲಿಂಗ ಮಹಾಸ್ವಾಮಿಗಳು,ಶಿಕಾರಿಪುರ ಶ್ರೀ ವಿರಕ್ತಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ತುರುವೆಕೆರೆಯ ಶ್ರೀ ಅಲ್ಲಮಪ್ರಭು ಮಠದ ಶ್ರೀ ತಿಪ್ಪೇರುದ್ರ ಮಹಾಸ್ವಾಮಿಗಳು, ಧಾರವಾಡ ಗರಗದ ಶ್ರೀ ಪ್ರಭು ರಾಜೇಂಧ್ರ ದೇವರು ಆಶೀರ್ವಚನ ನೀಡಿದರು.

ದಶಮಾನೋತ್ಸವದ 5 ದಿನಗಳ ಕಾಲದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವಹಿಸಿದ ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಜಗದ್ಗುರು ಡಾ|ಬಸವ ಮಾಚಿದೇವ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಿ ಆಶೀರ್ವಚನ ನೀಡಿದರು. ದಾನಿ ಎಂ.ಕೆ.ಹನುಮಂತಪ್ಪ ಹೊಸಪೇಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಕಲ್ಪ ಸೇವಾ ಟ್ರಸ್ಟ ವತಿಯಿಂದ ಪ್ರತಿಭಾಪುರಸ್ಕಾರ ನೀಡಲಾಯಿತು. ದೇವಾಲಯದ ಪ್ರಧಾನ ಕಾರ್ಯದರ್ಶಿ ಸದಾನಂದ ಮಡಿವಾಳ ಸ್ವಾಗತಿಸಿದರು.

Share This
300x250 AD
300x250 AD
300x250 AD
Back to top