ಹೊನ್ನಾವರ: ತಾಲೂಕಿನ ಮುಗ್ವಾದ ಸರಕಾರಿ ಹಿ. ಪ್ರಾ. ಶಾಲೆಯಲ್ಲಿ ನಡೆದ ಎಸ್ಡಿಎಂಸಿ ಸಭೆಯನ್ನು ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ ಮಂಜು ಗೌಡ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು.
ಸಭೆಯಲ್ಲಿ ಸಭೆಯ ನಿರ್ಣಯಗಳ ಮಂಡನೆ ಮತ್ತು ಅವಲೋಕನ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ಪೋಷಕರ ಜವಾಬ್ದಾರಿ, ನನ್ನ ಶಾಲೆ, ನನ್ನ ಕೊಡುಗೆ, ಮೂಲಭೂತ ಸೌಕರ್ಯಗಳ ನಿರ್ವಹಣೆ ಮತ್ತು ಶಾಲಾ ಸುರಕ್ಷತೆಯ ಕ್ರಮಗಳು, ದಾಖಲಾತಿ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ, ಸಮುದಾಯದಲ್ಲಿ ಮಕ್ಕಳು ಮುಕ್ತ ವಾತಾವರಣದಲ್ಲಿ ಸ್ಥಳೀಯ ಸಂಪನ್ಮೂಲಗಳಿಂದ ಕಲಿಯಲು ಸೂಕ್ತ ಪರಿಸರವನ್ನು ನಿರ್ಮಿಸುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಮನರಂಜನೆಗಾಗಿ ಮಕ್ಕಳಿಗೆ ಆಟವನ್ನು ಆಡಿಸಲಾಯಿತು. ಇದರಿಂದ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿ ಆಯಿತು.
ಸಭೆಯಲ್ಲಿ ಸದಸ್ಯರೆಲ್ಲರು ಕ್ರಿಯಾತ್ಮಕವಾಗಿ ಭಾಗವಹಿಸಿ, ಶಾಲಾ ಅಭಿವೃದ್ಧಿಗಾಗಿ ತಮ್ಮ ಸಹಾಯ ಹಸ್ತ ಚಾಚುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಾಧ್ಯಾಪಕರಾದ ವೀಣಾ ಡಿ. ನಾಯ್ಕ ಪ್ರಾಸ್ತಾವಿಕ ಮಾತನ್ನಾಡಿದರು. ಸಹಶಿಕ್ಷಕರಾದ ನಾಗವೇಣಿ ಆರ್. ಶೇಟ್ ಸ್ವಾಗತಿಸಿದರು. ಚೇತನಾ ನಾಯ್ಕ ಅಭಿನಂದನೆ ಸಲ್ಲಿಸಿದರು.