ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಕಾರವಾರ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, ಬಾಡ ಹಾಗೂ ಸಂಗಮ ಸೇವಾ ಸಂಸ್ಥೆ (ರಿ) ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ “ಪ್ಲಾಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯ, ಬ್ಯಾಟರಿ ತ್ಯಾಜ್ಯ, ಜೀವ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಕುರಿತಾದ ಪರಿಸರ ಜಾಗೃತಿ ಕಾರ್ಯಕ್ರಮ” ಬುಧವಾರ ನಡೆಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ಲಾಸ್ಟಿಕ್ ತ್ಯಾಜ್ಯ, ಬ್ಯಾಟರಿ ತ್ಯಾಜ್ಯ, ಘನತ್ಯಾಜ್ಯಗಳ ನಿರ್ವಹಣೆ ಮತ್ತು ಅವುಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ಅವುಗಳ ನಿರ್ವಹಣೆ ಮಾಡದಿದ್ದ ಪಕ್ಷದಲ್ಲಿ ಪರಿಸರದ ಮೇಲಾಗುವ ಗಂಭೀರ ಸಮಸ್ಯೆಗಳ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ,ಜೀವ ವೈದ್ಯಕೀಯ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು ಹಾಗೂ ಮನೆಗಳಲ್ಲಿ ಉತ್ಪತ್ತಿಯಾಗುವ ಜೀವ ವೈದ್ಯಕೀಯ ತ್ಯಾಜ್ಯವನ್ನು ಜನ ಸಾಮಾನ್ಯರು ಯಾವ ರೀತಿ ಸಂಗ್ರಹಣೆ ಮಾಡಬೇಕು ಎಂಬ ಬಗ್ಗೆ ತಿಳಿಸಿದರು.
ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎನ್.ಶೆಟ್ಟಿ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, ಬಾಡ, ಸಹಾಯಕ ಪ್ರಾಧ್ಯಾಪಕಿ ನಯನಾ ನಾಯ್ಕ, ಕಾರ್ಯಕ್ರಮದ ಸಂಯೋಜಕ ಡಾ. ಶಿವಕುಮಾರ ನಾಯಕ ಮತ್ತಿತರರು ಇದ್ದರು.