ಶಿರಸಿ: ರಾಜ್ಯಪ್ರಸಿದ್ಧ ಬನವಾಸಿ ಕದಂಬೋತ್ಸವದಲ್ಲಿ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಫಲಪುಷ್ಪ ಮತ್ತು ವಸ್ತು ಪ್ರದರ್ಶನ ಗಮನ ಸೆಳೆಯಿತು. ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಉದ್ಘಾಟಿಸಿದರು. ಜೊತೆಯಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ಇದ್ದರು.
ಹೂಗಳಿಂದ ನಿರ್ಮಿಸಲಾದ ಮಧುಕೇಶ್ವರ ದೇವರ ಮೂರ್ತಿ, ಹದುನೈದು ಬೇರೆ ಬೇರೆ ತಳಿಗಳ ಸುಮಾರು ಇಪ್ಪತ್ತೈದು ಸಾವಿರ ಹೂವುಗಳಿಂದ ತಯಾರಿಸಿದ ವಿವಿಧ ಆಕೃತಿಗಳು ಜನರ ಮನ ಸೆಳೆಯಿತು.
ಸುಮಾರು ಆರಕ್ಕೂ ಅಧಿಕ ಕಡೆ ಹೂಗಳಿಂದನೇ ನಿರ್ಮಿಸಲ್ಪಟ್ಟ ಪೋಟೋ ಪಾಯಿಂಟ್ ಜನರಿಗೆ ಸೆಲ್ಪಿ ಕ್ರೆಜ್ ಹೆಚ್ಚಿಸಿತ್ತು. ವಸ್ತು ಪ್ರದರ್ಶನದಲ್ಲಿ 30 ಕ್ಕೂ ಅಧಿಕ ಮಳಿಗೆಗಳು ಸಾರ್ವಜನಿಕ ಗಮನಸೆಳೆಯುವುದರ ಜೊತೆಗೆ ಕೃಷಿ ಇಲಾಖೆಯಿಂದ ಸಿರಿಧಾನ್ಯದಿಂದ ಕುಟೀರ ನಿರ್ಮಿಸಲಾಗಿತ್ತು.
ತೋಟಗಾರಿಕಾ, ಕೃಷಿ ಇಲಾಖೆಯಿಂದ ಸ್ಥಾಪಿತವಾದ ರೈತ ಉತ್ಪಾದಕ ಕಂಪನಿಗಳ ಉತ್ಪನ್ನಗಳ ಪ್ರದರ್ಶನ, ಇಲಾಖಾ ಕಾರ್ಯಕ್ರಮಗಳ ಪಕ್ಷಿನೋಟ, ಕಸದಿಂದ ರಸದಡಿ ವಿವಿಧ ತೋಟಗಾರಿಕೆ ತ್ಯಾಜ್ಯದಿಂದ ತಯಾರಿಸಿದ,ಅಡಿಕೆಯಿಂದ ಮಾಡಿದ ಹೂವು, ಕಸದಿಂದ ರಸ ಎಂಬ ಬಾಳೆ ನಾರಿನ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.
ಅಲ್ಲದೇ, ಹೊಸ ತಳಿಯ ಅನಾನಸ್, ಕುಂಬಳಕಾಯಿ, ವಿವಿಧ ಜಾತಿಯ ತರಕಾರಿಗಳು, ಫಲಪುಷ್ಪಗಳಲ್ಲಿ ಹೂವಿನ ಅಲಂಕಾರವನ್ನು ಶಿವಮೊಗ್ಗದ ಗಿರೀಶ ಆ್ಯಂಡ್ ಕಂಪೆನಿ ನಿರ್ಮಿಸಿತ್ತು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಪಿ.ಸತೀಶ, ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಮತ್ತಿತರರು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದವರಿಗೆ ಮಾಹಿತಿ ನೀಡಿದರು.