ಶಿರಸಿ: ತಾಲೂಕಿನ ಮಾತ್ನಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 22 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ತಿಮ್ಮಪ್ಪ ನಾಯ್ಕ್ ನಿವೃತ್ತಿ ಹೊಂದಿದ್ದು, ಅವರನ್ನು ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಸಂಪೂರ್ಣ ಅಭಿವೃದ್ದಿಗೆ ಕಾರಣೀಕರ್ತರಾದ ಕಾಡ್ಕೋಳಿ ಶ್ರೀಪತಿ ಭಟ್ಟ ಅವರನ್ನು ಊರ ನಾಗರಿಕರು ಅಭಿನಂದಿಸಿ ಸನ್ಮಾನಿಸಿದರು.
ತಿಮ್ಮಪ್ಪ ವೆಂಕಟ್ರಮಣ ನಾಯ್ಕ ಮೂಲತಃ ಕುಮಟಾ ಊರಕೇರಿಯವರು. 1989 ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಯಲಾದಹಳ್ಳಿರಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ ಮಾತ್ನಳ್ಳಿ ಶಾಲೆಯಲ್ಲಿ 2002 ರಲ್ಲಿ ಸೇವೆಯನ್ನು ಪ್ರಾರಂಭಿಸಿದ್ದರು. ಅವರು ಮಾತ್ನಳ್ಳಿ ಶಾಲೆಯನ್ನು ಕೇವಲ ಶಿಕ್ಷಕರಾಗಿ ನೋಡದೇ ಪ್ರತಿಯೊಂದು ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ನೂರಾರು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಶ್ರಮಿಸಿದ್ದಲ್ಲದೇ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು, ಪ್ರತಿ ನಿತ್ಯದ ಬಿಸಿಊಟದ ತರಕಾರಿಗೆ ಶಾಲೆಯಲ್ಲಿ ಬೆಳೆದ ತರಕಾರಿ, ಹೂತೋಟ ನಿರ್ಮಾಣ ಮಾಡಿ ಶಿರಸಿ ವಿಭಾಗದಲ್ಲಿ ಅತ್ಯುತ್ತಮ ಪ್ರಾಥಮಿಕ ಶಾಲೆ ಎಂದು ಹೆಸರುವಾಸಿಯಾಗಲು ಕಾರಣೀಕರ್ತರಾಗಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.
ಶಾಲೆಗೆ ಸ್ವಂತ ಹಣವನ್ನು ಖರ್ಚು ಮಾಡಿ ಬಣ್ಣವನ್ನು ಮಾಡಿಸಿದ್ದು, ಧ್ವಜ ಕಟ್ಟೆಯನ್ನು ಮಾಡಿಸಿಕೊಟ್ಟಿರುವುದನ್ನು ನೆನೆದು ನಿವೃತ್ತಿಯ ದಿನದಂದು ಶಾಲಾಭಿವೃದ್ದಿ ಸಮಿತಿ ಸದಸ್ಯರು ಊರ ನಾಗರೀಕರು ಸೇರಿ ಭವ್ಯ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತ್ನಳ್ಳಿಯಂತಹ ಒಂದು ಚಿಕ್ಕ ಊರಿನಲ್ಲಿ ವ್ಯವಸ್ಥಿತವಾದ ಕಿರಿಯ ಪ್ರಾಥಮಿಕ ಶಾಲೆ 35 ವರ್ಷಗಳ ಹಿಂದೆ ಪ್ರಾರಂಭಿಸಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಲು ಕಾರಣೀಕರ್ತರಾದ ಕಾಡ್ಕೋಳಿ ಶ್ರೀಪತಿ ಭಟ್ಟ ಅವರನ್ನು ಊರನಾಗರಿಕರೆಲ್ಲ ಸೇರಿ ಅಭಿನಂದನೆಯನ್ನು ಸಲ್ಲಿಸಿದರು.
1989 ರಲ್ಲಿ ಮಾತ್ನಳ್ಳಿಯಲ್ಲಿ ಒಂದು ಶಾಲೆ ಪ್ರಾರಂಭವಾದಾಗ ಕಾಡ್ಕೋಳಿಯ ತಮ್ಮ ಮನೆಯ ಪಡಸಾಲೆಯಲ್ಲಿ 2 ವರ್ಷ ಶಾಲೆಯನ್ನು ನಡೆಸಲು ಅವಕಾಶ ಕಲ್ಪಿಸಿ, 1991 ರಲ್ಲಿ ಸ್ವಂತ ಕಟ್ಟಡ ಮಾಡಿಸಲು ಓಡಾಟ, ಮಕ್ಕಳು ಜಾಸ್ತಿ ಆದಂತೆ ಹೆಚ್ಚುವರಿ ಕಟ್ಟಡ ಮಂಜೂರಿಗೆ ವ್ಯವಸ್ಥೆ ಮಾಡಿಸಲು ಅವರ ಶ್ರಮವನ್ನು ನೆನಪಿಸಿಕೊಳ್ಳಲಾಯಿತು. ಪ್ರತಿ ವರ್ಷ ತಮ್ಮ ಮನೆಯ ಆಳುಗಳನ್ನು ತಂದು ಶಾಲೆಯ ಸುತ್ತಲೂ ಸ್ವಚ್ಚತಾ ಕಾರ್ಯ ಮತ್ತು ಹಂಚು, ಪಕಾಸುಗಳಿಗೆ ಹುಳು ಹಿಡಿಯದಂತೆ ಬಣ್ಣ ಹೊಡೆಯುವ ಅವರ ಕಾರ್ಯ ಈಗಲೂ ನಡೆದಿರುವುದು ಶ್ಲಾಘನೀಯವಾಗಿದೆ. ಶಾಲೆಯ ಕರೆಂಟ್ ಬಿಲ್ ತುಂಬುವ ವ್ಯವಸ್ಥೆ, ಮನೆಯಿಂದಲೇ ನೀರಿನ ವ್ಯವಸ್ಥೆ, ಮಕ್ಕಳ ಬಿಸಿಯೂಟಕ್ಕೆ ಅವರ ಮನೆಯಲ್ಲಿ ಇರುವ ಮಜ್ಜಿಗೆ, ತರಕಾರಿ ನಿರಂತರ ಪೂರೈಕೆ ಆಗುತ್ತಿದೆ. ಬಿಸಿಯೂಟ ಪ್ರಾರಂಭಕ್ಕಿಂತ ಮುಂಚೆ ಶಾಲೆಯ ಎಲ್ಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅವರ ಮನೆಯಲ್ಲೇ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿರುವುದನ್ನು ಊರನಾಗರಿಕರು ನೆನಪಿಸಿಕೊಂಡು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಾರಾಯಣ ಹೆಗಡೆ ಗಡಿಕೈ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ರವೀಂದ್ರ ಭಟ್ಟ ಕಾಡ್ಕೋಳಿ, ನಾಗರಾಜ ಹೆಗಡೆ, ಗ್ರಾಮ ಪಂಚಾಯತ ಸದಸ್ಯರು, ಶಿಕ್ಷಣ ಇಲಾಖೆಯ ಸಂಯೋಜಕರು, ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾದಿಕಾರಿಗಳು, ಕ್ಲಸ್ಟರ್ ಮಟ್ಟದ ಶಿಕ್ಷಕರು ಹಾಜರಿದ್ದರು.