ಕಾರವಾರ: ನಮ್ಮ ದೇಶದ ಅನ್ನ,ನೀರು,ಭೂಮಿ,ಗಾಳಿ ಬಳಸಿಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗುವುದು ದೇಶದ್ರೋಹದ ಕೆಲಸವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಸೀರ್ ಹುಸೇನ್ ಕೂಡಾ ಮಾಧ್ಯಮದವರ ಪ್ರಶ್ನೆಗೆ ಗೌರವಿಸದೇ ಅನಾಗರಿಕತೆಯಿಂದ ವರ್ತಿಸಿದ್ದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಂಡ್ಯದಲ್ಲಿ ಹನುಮಧ್ವಜ ತೆರವು, ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲು, ದೇಶ ವಿರೋಧಿ ಘೋಷಣೆ ಕೂಗಿದರೂ ಕ್ರಮವಹಿಸದೇ ಇರುವುದು ಒಲೈಕೆ ರಾಜಕಾರಣವಾಗಿದೆ ಎಂದರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸವೂ ಆಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಮರಿಚಿಕೆಯಾಗಿದೆ ಎಂದರು.
ಪಕ್ಷದ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆ ಮಾಡುವಾಗ ಎಲ್ಲಾ ಹಿರಿಯರ ಅಭಿಪ್ರಾಯ ಪಡೆದೇ ಆಯ್ಕೆ ಮಾಡಲಾಗಿದೆ. ಸಂಘಟನಾತ್ಮಕವಾಗಿ ಬಲ ತುಂಬುವ ಉದ್ದೇಶದಿಂದ ಹೊಸಬರಿಗೆ, ಹಳಬರಿಗೆ ಕೂಡಾ ಅವಕಾಶ ನೀಡಿದ್ದೇವೆ. ಎಲ್ಲರಿಗೂ ಹುದ್ದೆ ನೀಡಲು ಆಗುವುದಿಲ್ಲ. ಏನೆ ಅಸಮಾಧಾನವಿದ್ದರೂ ಪರಿಹರಿಸಿಕೊಂಡು ಪಕ್ಷ ಸಂಘಟನೆಯಲ್ಲಿ ಎಲ್ಲರೂ ಒಟ್ಟಾಗಿ, ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಖಂಡರಾದ ಜಗದೀಶ ನಾಯಕ ಮೊಗಟಾ, ಗೋವಿಂದ ನಾಯ್ಕ, ಪ್ರೇಮಕುಮಾರ ನಾಯ್ಕ, ಸಂಜಯ ಸಾಳುಂಕೆ, ನಾಗೇಶ ಕುರ್ಡೇಕರ, ರಾಜೇಂದ್ರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.