ಕಾರವಾರ: ಹಿರಿಯ ರಾಜಕಾರಣಿ, ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾ. 5ರಂದು ಸಾಗರದಲ್ಲಿ ನಾಮಧಾರಿ ಸಮಾಜದಿಂದ ಸನ್ಮಾನ ಹಾಗೂ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಕೆ.ಜಿ.ನಾಯ್ಕ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಗರದ ಗಣಪತಿಕರೆ ಬಳಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿದ್ದಾಪುರದಿಂದಲೇ ಎರಡು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಯಡಿಯೂರಪ್ಪ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸಮಾವೇಶ ಈ ಹಿಂದೆಯೇ ನಿಗದಿಯಾಗಿತ್ತು. ಆದರೆ ಕಾರಣಾಂತರದಿಂದ ಮುಂದೂಡಲಾಗಿತ್ತು. ಇದರ ಹಿಂದೆ ಚುನಾವಣೆಯ ಅಥವಾ ರಾಜಕೀಯ ಕಾರಣವಿಲ್ಲ. ಅವರು ಮುಖ್ಯಮಂತ್ರಿಯಿದ್ದಾಗ ನಾಮಧಾರಿ ಸಮುದಾಯಕ್ಕೆ ಸಾಕಷ್ಟು ಸಹಾಯ-ಸಹಕಾರ ನೀಡಿದ್ದಾರೆ ಎಂದರು. ಲೋಕಸಭೆ ಚುನಾವಣೆಗೆ ಈಗಿರುವ ಸಂಸದರನ್ನು ಪುನಃ ಅಭ್ಯರ್ಥಿಯನ್ನಾಗಿಸಿದರೆ ಆಕ್ಷೇಪವಿಲ್ಲ. ಬದಲಾವಣೆ ಮಾಡುವುದಾದರೆ ಹಿಂದುಳಿದ ವರ್ಗಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು. ಪ್ರಶಾಂತ ನಾಯ್ಕ, ಗೋವಿಂದ ನಾಯ್ಕ, ರಾಜೇಂದ್ರ ನಾಯ್ಕ, ರಮೇಶ ನಾಯ್ಕ, ಪ್ರೇಮಕುಮಾರ ನಾಯ್ಕ, ಮಂಜುನಾಥ ನಾಯ್ಕ, ವಿಶ್ವನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.