ದಾಂಡೇಲಿ: ತಾಲೂಕಿನ ಹಳಿಯಾಳ – ದಾಂಡೇಲಿ ರಸ್ತೆಯಲ್ಲಿ ಬರುವ ಕರ್ಕಾ ಕ್ರಾಸ್ ಬಳಿಯ ಆಲೂರು ಹತ್ತಿರ ಟ್ಯಾಂಕರಿನಲ್ಲಿ ಬೆಂಕಿ ಕಾಣಿಸಿಕೊಂಡು, ಅದೃಷ್ಟವಶಾತ್ ಅನಾಹುತವೊಂದು ತಪ್ಪಿದ ಘಟನೆ ಶುಕ್ರವಾರ ನಡೆದಿದೆ.
ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಫರ್ನಿಶ್ ಆಯಿಲ್’ನ್ನು ತುಂಬಿಕೊಂಡು ಬರುತ್ತಿದ್ದ ಟ್ಯಾಂಕರಿನಲ್ಲಿ ಆಲೂರು ಹತ್ತಿರ ಬರುತ್ತಿದ್ದಂತೆಯೇ ಅಗ್ನಿ ಕಾಣಿಸಿಕೊಂಡಿದೆ. ತಕ್ಷಣವೆ ಟ್ಯಾಂಕರ್ ನಿಲ್ಲಿಸಿ ಚಾಲಕ ಕೆಳಗಿಳಿದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನ ಭೇಟಿ ನೀಡಿ, ಬೆಂಕಿಯನ್ನು ನಂದಿಸಿದೆ. ಟ್ಯಾಂಕರ್ ವಾಹನದ ಮುಂಭಾಗಕ್ಕೆ ಸಂಪೂರ್ಣ ಹಾನಿಯಾಗಿದ್ದು, ಫರ್ನಿಶ್ ಆಯಿಲ್ ತುಂಬಿಕೊಂಡಿದ್ದ ಕಡೆ ಬೆಂಕಿ ಆವರಿಸುವ ಸಾಧ್ಯತೆ ಇತ್ತಾದರೂ, ಅಗ್ನಿಶಾಮಕ ವಾಹನದ ತಡವರಿಯದ ಸ್ಪಂದನೆಯಿಂದ ಆಗಬಹುದಾದ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ದಾಂಡೇಲಿಯ ವಲಯಾರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿಯವರು ತಕ್ಷಣವೇ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿದ್ದಾರೆ. ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.