ಶಿವಮೊಗ್ಗ: ರಾಜ್ಯದಲ್ಲಿರುವ ಮಠ ಮಾನ್ಯಗಳನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವುಗಳ ಪಾಡಿಗೆ ಅವುಗಳನ್ನು ಬಿಟ್ಟುಬಿಡುವುದು ಒಳಿತು ಎಂದು ಯಡತೊರೆಯ ಶ್ರೀ ಯೋಗನಂದೇಶ್ವರ ಸರಸ್ವತಿ ಮಠದ ಯತಿಗಳಾದ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಭಾನುವಾರ ನಗರದ ಖ್ಯಾತ ವಕೀಲರಾದ ಅಶೋಕ ಜಿ.ಭಟ್ ಅವರ ನಿವಾಸದಲ್ಲಿ ಹಮ್ಮಿಕೊಂಡ ಸರಳ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ಒಂದು ಕೋಟಿ ರೂಪಾಯಿ ಆದಾಯವಿರುವ ಮಠಗಳಿಂದ ಶೇಕಡಾ 10ರಷ್ಟನ್ನು ಸರ್ಕಾರಕ್ಕೆ ಕೊಡುವ ಮಸೂದೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಆ ಮಸೂದೆ ಕುರಿತು ನನಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ವಿಧಾನ ಪರಿಷತ್ತಿನಲ್ಲಿ ಮಸೂದೆ ಬಿದ್ದು ಹೋಯಿತು ಎಂದು ಪತ್ರಿಕೆಗಳ ಹೆಡ್ಡಿಂಗುಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ ಅಷ್ಟೆ ಎಂದು ತಿಳಿಸಿದರು.
ಚಿಕ್ಕ ಪುಟ್ಟ ಮಠಗಳ ಅಭಿವೃದ್ಧಿ, ಅಲ್ಲಿಯ ಅರ್ಚಕರಿಗೆ ಕೊಡಬೇಕು ಅಂತಾದರೆ ಅದಕ್ಕೆ ಮಸೂದೆ, ಕಾಯ್ದೆ, ಕಾನೂನು ಜಾರಿಗೆ ತರುವ ಅಗತ್ಯತೆ ಇಲ್ಲ. ದೊಡ್ಡ ದೊಡ್ಡ ಮಠಗಳೇ ಚಿಕ್ಕ ಪುಟ್ಟ ಮಠಗಳಿಗೆ ಸಹಾಯ ಮಾಡಲು ಮುಂದೆ ಬರುತ್ತವೆ ಎಂದು ಮಾರ್ಮಿಕವಾಗಿ ನುಡಿದರು. ಸರ್ಕಾರಗಳು ಧಾರ್ಮಿಕ ದತ್ತಿ ಇಲಾಖೆಗಳ ನಿಯಂತ್ರಣದಲ್ಲಿರುವ ದೇವಸ್ಥಾನಗಳ ಸಮಿತಿಗೆ ನಾಮ ನಿರ್ದೇಶನ ಮಾಡುವ ಹಸ್ತಕ್ಷೇಪವನ್ನೂ ಮಾಡಬಾರದು. ಕೆಲವೊಮ್ಮೆ ಧಾರ್ಮಿಕ ವಿಧಿ ವಿಧಾನಗಳ ಯಾವುದೇ ಅನುಭವ, ಮಹತ್ವ ತಿಳಿಯದವರನ್ನು ನಾಮ ನಿರ್ದೇಶನ ಮಾಡಲಾಗುತ್ತಿದೆ. ಇದು ಆ ದೇವಸ್ಥಾನಗಳ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಅಯ್ಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯಾದ ಬಳಿಕ ಅಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ತಾವು ಶ್ರೀ ರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದು ಎಲ್ಲ ವಾತಾವರಣ ಗಮನಿಸಿದಾಗ ತಮಗೆ ಮನವರಿಕೆಯಾದ ಸಂಗತಿ ಇದಾಗಿದೆ ಎಂದ ಅವರು ಜಮ್ಮು ಕಾಶ್ಮೀರದಲ್ಲೂ ಕಲಂ 370 ತೆಗೆದು ಹಾಕಿದ ನಂತರ ಅಲ್ಲಿನ ನಾಗರಿಕರು, ಬೇರೆ ಕಡೆಯಿಂದ ಬರುವ ಪ್ರವಾಸಿಗರೂ ಸ್ವತಂತ್ರವಾಗಿ ಓಡಾಡುವ ವಾತಾವರಣ ಸೃಷ್ಟಿಯಾಗಿದೆ. ಮೊದಲಿದ್ದಷ್ಟು ಆತಂಕ ಈಗಿಲ್ಲ. ಆದರೂ ಬಹಳ ಜಾಗರೂಕತೆಯಿಂದ ಸಂಚರಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. ಸರ್ಕಾರದಿಂದ ದೇವಸ್ಥಾನಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವು ಯಾವುದೇ ಅಡೆ ತಡೆ ಗಳನ್ನು ದಾಟಿ ಕೊನೆಯಲ್ಲಿ ಅನುದಾನಕ್ಕೆ ಬಿಡುಗಡೆಯಾದ ಹಣದಲ್ಲೆ ಸ್ವಲ್ಪ ಭಾಗವೇ ದೇವಸ್ಥಾನಗಳನ್ನು ತಲುಪುವ ಪದ್ಧತಿ ಈಗ ಇದೆ. ಆದರೆ ಅನುದಾನ ರೂಪದಲ್ಲಿ ನೀಡುವ ಹಣ ಸಂಪೂರ್ಣವಾಗಿ ದೇವಾಲಯಗಳಿಗೆ ತಲುಪುವ ಕ್ರಮವಾಗಬೇಕೆಂದು ಶ್ರೀಗಳು ಆಶಿಸಿದರು. ಈ ಸಂದರ್ಭದಲ್ಲಿ ಸ್ವರ್ಣರಶ್ಮೀ ಟ್ಟಸ್ಟಿನ ಡಾ.ಬಾಲಕೃಷ್ಣ ಹೆಗಡೆ, ಪಿ.ಪಿ.ಹೆಗಡೆ, ವಿದ್ವಾನ ಲಕ್ಷ್ಮಿನಾರಾಯಣ ಜೋಷಿ, ಡಿ.ಎಂ.ಹೆಗಡೆ, ವಕೀಲರಾದ ಕಾಂತರಾಜು, ಮಹೇಂದ್ರ ಹೆಗಡೆ ಮೊದಲಾದವರಿದ್ದರು.