ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಆರು ದಿನಗಳ ಕಾಲ ಆಯೋಜಿಸಿದ್ದ ವೇದ-ನಾದ ಬೋಧೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಮಕ್ಕಳಿಗೆ ಪಠ್ಯ ವಿಷಯದ ಜತೆಗೆ ವೇದಾಧ್ಯಯನ ಹಾಗೂ ಶಾಸ್ತ್ರಾಧ್ಯಯನದ ಕುರಿತು ಮಾರ್ಗದರ್ಶನ ಹಾಗೂ ಅದರಲ್ಲಿನ ತಿರುಳನ್ನು ತಿಳಿಸಿಕೊಡಬೇಕಾಗಿದೆ ಎಂದರು.
ಮನುಷ್ಯ ಜನ್ಮ ದುರ್ಲಭವಾದದ್ದು. ಅದರಂತೆ ವೇದಾಧ್ಯಯನವೂ ದುರ್ಲಭವಾಗಿದೆ. ವೇದಾಧ್ಯಯನ-ಶಾಸ್ತ್ರಾಧ್ಯಯನವನ್ನು ಪ್ರತಿ ಮನೆಯಲ್ಲಿಯ ವಟುಗಳಿಗೆ ಪಾಲಕರು ಕಲಿಸುವಂತಾಗಬೇಕು. ಶ್ರೀ ಪುರುಷೋತ್ತಮ ನರಸಿಂಹ ಭಾರತೀ ಸನಾತನ ಸಭಾ ನೆಲೆಮಾಂವ ಇವರು ಕಳೆದ ಹಲವು ವರ್ಷಗಳಿಂದ ವೇದಾಧ್ಯಯನ ಹಾಗೀ ಶಾಸ್ತ್ರಾಧ್ಯಯನದ ಕುರಿತು ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯವಾದ್ದು ಎಂದು ಹೇಳಿದರು.
ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡುತ್ತ ವೇದ ಒಂದು ಅನರ್ಘ್ಯ ರತ್ನ.ಇದನ್ನು ಯಾರು ಕಾಪಾಡಬೇಕಾಗಿತ್ತೊ ಅವರು ಮಾಡುತ್ತಿಲ್ಲ. ವಿದೇಶದಲ್ಲಿ ವೇದಾಧ್ಯಯನ ಅದರ ಮಹತ್ವದ ಕುರಿತು ಕಾರ್ಯಕ್ರಮ ನಡೆಯುತ್ತದೆ. ಆದರೆ ನಮ್ಮಲ್ಲಿ ಇಲ್ಲ. ವೇದ ಪಾರಾಯಣ ಮಾಡಿದರೆ ಒಂದು ಯಜ್ಞ ಮಾಡಿದಂತೆ. ಪ್ರತಿ ಮನೆಯಲ್ಲಿ ವೇದ ಪಾರಾಯಣ ಮಾಡಿಸಬೇಕು. ಇದರಿಂದ ವೇದದ ರಕ್ಷಣೆ ಮಾಡಿದಂತಾಗುತ್ತದೆ. ವೇದ ಒಂದು ಜ್ಞಾನದ ಭಂಡಾರ. ಆದ್ದರಿಂದ ಪೂರ್ಣ ವೇದಾಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು. ಸಿದ್ದಾಪುರ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆವಹಿಸಿದ್ದರು. ಶ್ರೀಮನ್ನೆಲೆಮಾವಿನ ಮಠದ ಅಧ್ಯಕ್ಷ ಗಣಪತಿ ಎಂ.ಹೆಗಡೆ ಹೆಗ್ನೂರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷ್ಣಯಜುರ್ವೇದ ವಿದ್ವಾಂಸರಾದ ವೇ.ಬ್ರ.ಶ್ರೀ ಪುಟ್ಟಯ್ಯ ಶಾಸ್ತಿçಗಳು ಮತ್ತಿಘಟ್ಟ (ಬೆಂಗಳೂರು) ಇವರಿಗೆ ವೇದ ಸಮ್ಮಾನ ಮಾಡಲಾಯಿತು.ಮನೋಜ ಭಟ್ಟ ಹೋಬಳಿ ನೆಲೆಮಾಂವ್ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ದೇವರು ಭಟ್ಟ ಹೋಬಳಿ ನಲೆಮಾಂವ್ ಸ್ವಾಗತಿಸಿದರು. ಎಂ.ಜಿ.ಹೆಗಡೆ ಗೆಜ್ಜೆ ಕಿಬ್ಬಳ್ಳಿ ವಂದಿಸಿದರು. ಶೇಷಗಿರಿ ಭಟ್ಟ ಗುಂಜಗೋಡು ಕಾರ್ಯಕ್ರಮ ನಿರ್ವಹಿಸಿದರು. ನಂತರ ಮೇಧಾ ಭಟ್ಟ ಅಗ್ಗೇರೆ ಹಾಗೂ ವಿನಾಯಕ ಹೆಗಡೆ ಮುತ್ಮುರ್ಡು ಸಂಗಡಿಗರಿಂದ ನಡೆದ ನಾದೋತ್ಸವ ಮೆಚ್ಚುಗೆಗಳಿಸಿತು.