ಸರ್ವರ ಕೋರಿಕೆ ಮೇರೆಗೆ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ : ದೇಶಪಾಂಡೆ
ದಾಂಡೇಲಿ: ವಿವಿಧ ಸಂಘಟನೆಗಳ ಮತ್ತು ಸಾರ್ವಜನಿಕರ ಕೋರಿಕೆಯ ಮೇರೆಗೆ ದಾಂಡೇಲಿಯ ನಗರಸಭೆಯ ಆವರಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ತಾಳ್ಮೆ ಮತ್ತು ಶಿಸ್ತಿನಿಂದ ಸಂವಿಧಾನ ಶಿಲ್ಪಿಯ ಮೂರ್ತಿಯ ಮೆರವಣಿಗೆಯನ್ನು ನಡೆಸಬೇಕು. ಹಾಗೆ ಒಂದು ವಾರದೊಳಗೆ ಪುತ್ಥಳಿಯ ಪ್ರತಿಷ್ಟಾಪನೆಯನ್ನು ನೆರವೇರಿಸಬೇಕೆಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ನಗರ ಸಭೆಯ ಆವರಣದಲ್ಲಿ ಪ್ರತಿಷ್ಠಾಪಿಸಲ್ಪಡುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಮೆರವಣಿಗೆಗೆ ಭಾನುವಾರ ನಗರದ ಹಳಿಯಾಳ ರಸ್ತೆಯಲ್ಲಿ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಿ ಜೈ ಎಂದು ಘೋಷಣೆಗಳನ್ನು ಕೂಗಿ ಅಂಬೇಡ್ಕರ್ ಅಭಿಮಾನಿಗಳನ್ನು ಹುರಿದುಂಬಿಸಿದರು.
ನಗರಸಭೆ ಪೌರಾಯುಕ್ತರಾದ ಆರ್.ಎಸ್ ಪವಾರ್ ಪ್ರಸ್ತಾವಿಕವಾಗಿ ಮಾತನಾಡಿ ಇದೊಂದು ದಾಂಡೇಲಿ ನಗರಕ್ಕೆ ಐತಿಹಾಸಿಕ ದಿನವಾಗಿದೆ ಎಂದರು.
ಇದಕ್ಕೂ ಮೊದಲು ಸಮಿತಿ ಪದಾಧಿಕಾರಿಗಳು ಆರ್.ವಿ. ದೇಶಪಾಂಡೆ ಅವರಿಗೆ ಪೇಟಾ ತೊಡಿಸಿ ಶಾಲು ಹೊದಿಸಿ ಬರಮಾಡಿಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಅಂಬೇಡ್ಕರ್ ಅಭಿಮಾನಿಗಳು ಮೆರವಣಿಗೆಯ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತ ಸಂತಸ ಪಟ್ಟರು.
ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಲ್ಪಡುವ ಅಂಬೇಡ್ಕರ್ರವರ ಕಂಚಿನ ಮೂರ್ತಿ 11 ಅಡಿ ಎತ್ತರ ಮತ್ತು 1100 ಕೆಜಿ ತೂಕ ಹೊಂದಿದೆ. ಮೆರವಣಿಗೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಹಿದಾ ಪಠಾಣ್, ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ರಾಜಶೇಖರ್. ಐ.ಹೆಚ್, ಉಪಾಧ್ಯಕ್ಷ ಚಂದ್ರಕಾಂತ ನಡಿಗೇರ ಹಾಗೂ ಸಮಿತಿಯ ಪದಾಧಿಕಾರಿಗಳು, ನಗರಸಭೆ ಸದಸ್ಯರುಗಳು, ಸಂಘ-ಸಂಸ್ಥೆಗಳ ಮುಖಂಡರುಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.