ಜೋಯಿಡಾ : ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಜೋಯಿಡಾ ತಾಲೂಕಿನ ಪಣಸೋಲಿ ಗ್ರಾಮದ ನಿವಾಸಿ ವಿಶ್ವನಾಥ ಪುರುಷೋತ್ತಮ ಆಚಾರಿ (30)ಎಂಬಾತನೇ ಮೃತಪಟ್ಟ ದುರ್ದೈವಿ. ಪಣಸೋಲಿಯಿಂದ ಸಫಾರಿಗೆ ಹೋಗುವ ರಸ್ತೆಯ ಪಕ್ಕ ಟ್ರ್ಯಾಕ್ಟರ್ ಉರುಳಿ ಬಿದ್ದು ಅದರಡಿ ಸಿಲುಕಿಕೊಂಡಿದ್ದ ಚಾಲಕ ವಿಶ್ವನಾಥ ಪುರುಷೋತ್ತಮ ಆಚಾರಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ಇನ್ನೋರ್ವ ವ್ಯಕ್ತಿಗೆ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಬಾಳಿ ಬದುಕಬೇಕಾಗಿದ್ದ ವಿಶ್ವನಾಥ ಪುರುಷೋತ್ತಮ ಆಚಾರಿ ಮನೆಗೆ ಆಧಾರ ಸ್ತಂಭವಾಗಿದ್ದನು. ಆತನನ್ನು ಕಳೆದುಕೊಂಡ ಆತನ ಕುಟುಂಬದ ರೋಧನ ಕೇಳತೀರದು. ಈ ಘಟನೆಗೆ ಕಾರಣ ಏನು, ಈ ಟ್ರ್ಯಾಕ್ಟರಿನ ಮಾಲಕರು ಯಾರು?, ಈ ಟ್ರಾಕ್ಟರಿನ ದಾಖಲಾತಿಗಳು, ಟ್ರ್ಯಾಕ್ಟರಿಗೆ ಸಂಬಂಧಿಸಿದಂತೆ ವಿಮಾ ದಾಖಲಾತಿಗಳು, ಸಾರಿಗೆ ನಿಯಮಗಳ ಪ್ರಕಾರ ಇರಬೇಕಾದ ದಾಖಲಾತಿಗಳ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಬೇಕಾಗಿದೆ. ಯಾವ ಉದ್ದೇಶಕ್ಕೆ ಟ್ರ್ಯಾಕ್ಟರನ್ನು ಖರೀದಿಸಲಾಗಿದೆ? ಮತ್ತು ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ ಎನ್ನುವುದನ್ನು ತನಿಖೆ ಮಾಡಬೇಕಾಗಿದೆ.
ಈ ಘಟನೆಯ ಕುರಿತಂತೆ ಹಾಗೂ ಸಂಬಂಧಿಸಿದ ಟ್ರ್ಯಾಕ್ಟರ್ ಕುರಿತಂತೆ ಪೊಲೀಸರು ಸಮಗ್ರ ತನಿಖೆ ನಡೆಸಿ ವಿಶ್ವನಾಥ ಪುರುಷೋತ್ತಮ ಆಚಾರ್ಯ ಕುಟುಂಬಕ್ಕೆ ನ್ಯಾಯವನ್ನು ಕೊಡಿಸಬೇಕಾಗಿದೆ.