ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಕಲಿಕಾ ಕಾನು ಉದ್ಘಾಟಿಸಲಾಯಿತು. ಶಾಲೆಯ ಪಕ್ಕದ ಕಾಡಿನಲ್ಲಿ ಪರಿಸರ ಅಧ್ಯಯನದಲ್ಲಿನ ಪಾಠಗಳನ್ನು ಪರಿಸರದ ಜೊತೆ ಕಲಿಯುವಂತೆ ರೂಪಿಸಲಾದ ಪಠ್ಯಾಧಾರಿತ ನಿಸರ್ಗ ಕಲಿಕಾ ಕಾನನ್ನು ಕ್ಯಾದಗಿ ವಲಯ ಅರಣ್ಯಾಧಿಕಾರಿಗಳಾದ ಗಿರೀಶ ನಾಯ್ಕ ಉದ್ಘಾಟಿಸಿದರು. ಪ್ರಾಥಮಿಕ ಶಿಕ್ಷಣದಿಂದಲೇ ಪರಿಸರದ ಕುರಿತು ಹೆಚ್ಚಿನ ಕಾಳಜಿ ವಹಿಸಿ ಮಕ್ಕಳಿಗೆ ಕಾಡಿನ ಕುರಿತಾಗಿ ಜ್ಞಾನ ನೀಡುತ್ತಿರುವುದು ತುಂಬಾ ಸಂತೋಷದ ವಿಷಯ. ಪ್ರತಿ ಶಾಲೆಯಲ್ಲಿಯೂ ಕಲಿಕಾ ಕಾನು ರೂಪುಗೊಳ್ಳುವಂತಾಗಬೇಕು ಎಂದು ನುಡಿದರು.
ಕಲಿಕಾ ಕಾನಿನ ವಿಶೇಷತೆ : ಅಂದಾಜು 3 ಎಕರೆ ಕ್ಷೇತ್ರದಲ್ಲಿ ದಟ್ಟಕಾಡು, ಸಾಮಾನ್ಯ ಕಾಡು, ಕುರುಚಲು ಸಸ್ಯ ಹಾಗೂ ಪೊದೆ ಇರುವ ಕಾಡು ಹೀಗೆ 4 ವಿಭಾಗಗಳನ್ನು ಮಾಡಲಾಗಿದೆ. ಅಲ್ಲದೇ ಈ ಸ್ಥಳದಲ್ಲಿ ಮಣ್ಣಿನ ಪದರ ವೀಕ್ಷಣೆ, ಮಾದರಿ ಗುಹೆ, ಪ್ರಾಣಿಗಳ ಹೆಜ್ಜೆ ಗುರುತು ಪತ್ತೆ ಹಚ್ಚುವುದು, ಜೈವಿಕ ವಿಘಟನೆ, ಗಾಳಿಚಕ್ರ, ಮಣ್ಣಿನ ಸವಕಳಿ ಘಟಕ, ನಳಿಕೆ ಗೊಬ್ಬರ ಘಟಕ ವ್ಯವಸ್ಥೆ ಮಾಡಲಾಗಿದೆ. ಕಲಿಕಾ ಕಾನಿನಲ್ಲಿರುವ ಮರಗಳಿಗೆ ಸ್ಥಳೀಯ ಹೆಸರುಗಳಿಂದ ನಾಮಫಲಕ ಹಾಕಲಾಗಿದೆ.
ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಪಠ್ಯಕ್ರಮದ ಮೂಲಕ ಪುರಾವೆ ಆಧಾರಿತ ಚಿಂತನೆಯನ್ನು ಪ್ರೋತ್ಸಾಹಿಸುವುದು ಕಲಿಕಾ ಕಾನಿನ ತಳಹದಿಯಾಗಿದೆ. ನಲಿಕಲಿಯಿಂದ 7ನೇ ತರಗತಿಯವರೆಗಿನ ಪರಿಸರ ಸಂಬಂಧಿಸಿದ ಎಲ್ಲಾ ಕಲಿಕಾಂಶಗಳನ್ನು ಒಂದೇ ಕಡೆ ಆಸಕ್ತಿಯುತವಾಗಿ ಕಲಿಯುವಂತೆ ಅಭಿವೃದ್ಧಿಪಡಿಸಲಾಗಿದೆ. ಸಂಪೂರ್ಣ ಕಲಿಕೆಯು ಮಗುವಿನ ಆಸಕ್ತಿಯನ್ನು ಹೆಚ್ಚಿಸಿ ಸ್ವಪ್ರೇರಣೆಯಿಂದ, ಸ್ವಯಂ ಕಲಿಕೆ, ಹೋಲಿಕೆ ಮತ್ತು ಅನ್ವಯಗಳ ಮೂಲಕ ಕಲಿಕೆಯನ್ನು ಖಾತ್ರಿಗೊಳಿಸಲಾಗುತ್ತದೆ. ಒಟ್ಟಾರೆಯಾಗಿ ನಿಸರ್ಗದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ನೈಜವಾಗಿ, ನೇರ ಅನುಭವದ ಮೂಲಕ ಕಲಿಯುವುದಾಗಿದೆ.
ಕ್ರೀಡಾ ಸಾಧಕರಿಗೆ ಸನ್ಮಾನ : 2023-24ನೇ ಸಾಲಿನ 14 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದ ಹುಲ್ಕುತ್ರಿ ಶಾಲೆಯ ವಿದ್ಯಾರ್ಥಿನಿ ಕು. ಕೀರ್ತಿ ಮಂಜುನಾಥ ಗೌಡ ಹಾಗೂ 2023ನೇ ವರ್ಷದ ರಾಜ್ಯ ಮಟ್ಟದ ಸರಕಾರಿ ನೌಕರರ ಕ್ರೀಡಾ ಕೂಟದಲ್ಲಿ 200 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ 100 ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಶಾಲಾ ಶಿಕ್ಷಕಿ ರಂಜನಾ ಕೃಷ್ಣ ಭಂಡಾರಿಯವರಿಗೆ ಹಾಗೂ ವಲಯ ಅರಣ್ಯಾಧಿಕಾರಿಗಳಾದ ಗಿರೀಶ ನಾಯ್ಕ ಅವರಿಗೆ ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿಗಳು ಕಲಿಕಾ ಕಾನು ಉದ್ಘಾಟಿಸಿ, ಮಾಹಿತಿ ಫಲಕವನ್ನು ಅನಾವರಣಗೊಳಿಸಿದರು. ಸೋವಿನಕೊಪ್ಪ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಗಿರೀಶ ಶೇಟ್ ಆಲ್ಮನೆ ಕಲಿಕಾ ಕಾನಿನಲ್ಲಿ ಗಿಡವನ್ನು ನೆಟ್ಟು ನೀರೆರೆದರು. ಸೋವಿನಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಮಾ ಮಹೇಶ ಗೌಡ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಕರ ಶ್ರಮವನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಗಿರೀಶ ನಾಯ್ಕ, ಸೋವಿನಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಮಾ ಮಹೇಶ ಗೌಡ, ಗಿರೀಶ ಶೇಟ್, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುರೇಶ ಬಂಗಾರ್ಯ ಗೌಡ, ರಾಧಾ ವೆಂಕಟ್ರಮಣ ಗೌಡ, ಬಿಳಗಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಮಾಲತೇಶ, ನಿತೀನ ಪಟಗಾರ, ಮಹಾಲಕ್ಷ್ಮಿ ಮಂಜುನಾಥ ಗೌಡ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರ ದರ್ಶನ ಹರಿಕಾಂತ ಸ್ವಾಗತಿಸಿದರು, ನಾಗರತ್ನಾ ಭಂಡಾರಿ ಹಾಗೂ ರಂಜನಾ ಭಂಡಾರಿ ನಿರ್ವಹಿಸಿದರು. ಮೈತ್ರಿ ಹೆಗಡೆ ವಂದಿಸಿದರು.