ಸಿದ್ದಾಪುರ : ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ಮಧುಸೂದನ ಆರ್. ಕುಲ್ಕರ್ಣಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಸೋಮವಾರ ನಡೆಯಿತು.
ಸಭೆಯಲ್ಲಿ 2024-25 ನೇ ಸಾಲಿಗೆ ನೈರ್ಮಲ್ಯ ವಿಭಾಗ, ನೀರುಸರಬರಾಜು ವಿಭಾಗ, ಕೆಎಂಎಫ್ ಮತ್ತು ಸ್ಟೇಷನರಿ ವಿಭಾಗ ಮತ್ತು ಗಣಕಯಂತ್ರ ವಿಭಾಗದಲ್ಲಿ ಸಾಮಗ್ರಿ ಸಲಕರಣೆಗಳನ್ನು ಪೂರೈಸಿಕೊಳ್ಳಲು ಸ್ವೀಕೃತ ದರಪಟ್ಟಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಯಿತು. 2023-24 ನೇ ಸಾಲಿನ ಎಸ್.ಎಪ್.ಸಿ. ಮುಕ್ತ ನಿಧಿಯ SCSP & TSP ಬಂಡವಾಳ ಸೃಜನೆ ಅನುದಾನದ ಶೇ. 7.25 ಮತ್ತು ಶೇ. 5 ಯೋಜನೆ ಹಾಗೂ ಪಟ್ಟಣ ಪಂಚಾಯಿತಿ ನಿಧಿಯ ಶೇ. 24.10, ಶೇ. 7.25 ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳ ಅಂದಾಜು ಪತ್ರಿಕೆಗಳಿಗೆ ಮಂಜೂರಾತಿ ನೀಡಲಾಯಿತು.
ಪಟ್ಟಣ ಪಂಚಾಯಿತಿ ಕಛೇರಿ ಲೆಕ್ಕಪತ್ರ ವಿಭಾಗಕ್ಕೆ ಅಕೌಂಟ್ ಕನ್ಸಲ್ಟೆಂಟ್ ಮತ್ತು ಕಛೇರಿ ಕೆಲಸ ನಿರ್ವಹಣೆಗೆ ಡಾಟಾಎಂಟ್ರಿ ಆಪರೇಟರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. 2024-25 ನೇ ಸಾಲಿನ ಸುಮಾರು 14.81 ಕೋಟಿ ಮೊತ್ತದ ಬಜೆಟ್ ಅನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗದೀಶ ಆರ್.ನಾಯ್ಕ ಸಭೆಯಲ್ಲಿ ಮಂಡಿಸಿದರು. ವಿವಿಧ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿ ಅಂತಿಮವಾಗಿ 2.79 ಲಕ್ಷ ರೂ ಉಳಿತಾಯ ಬಜೆಟ್ ಸಭೆಯಲ್ಲಿ ಅನುಮೋದನೆಗೊಂಡಿತು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ, ಸದಸ್ಯರಾದ ಕೆ ಜಿ ನಾಯ್ಕ ಹಣಜೀಬೈಲ್, ಚಂದ್ರಕಲಾ ನಾಯ್ಕ, ರವಿ ಕುಮಾರ್ ನಾಯ್ಕ, ವಿಜಯೇಂದ್ರ ಗೌಡರ್ ಮುಂತಾದವರು ಇದ್ದರು. ಸಮುದಾಯ ಅಧಿಕಾರಿ ರಮೇಶ್ ಎಸ್ ವಂದಿಸಿದರು. ಸಿದ್ದಾಪುರದ ಪಟ್ಟಣ ಪಂಚಾಯಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ 2024-25 ನೇ ಆಯವ್ಯಯ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.