ಶಿರಸಿ: ಸಿದ್ದಾಪುರ ತಾಲೂಕಿನ, ಕಾನಸೂರ ಗ್ರಾಮ ಪಂಚಾಯಿತಿಯ, ಬಿಳೆಗೋಡು ಹಳ್ಳಿಯ ಮಾಭ್ಲೇಶ್ವರ ಚಂದು ಮರಾಠಿ ಇತನು ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ಮೇಲೆ ತೀವ್ರ ಸ್ವರೂಪದ ಗುರುತರ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ದಾಖಲಿಸಿದ ಕ್ರಿಮಿನಲ್ ಪ್ರಕರಣದಲ್ಲಿ, ಶಿರಸಿ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆರೋಪಿತನನ್ನು ನಿರ್ದೋಶಿ ಎಂದು ತೀರ್ಪು ನೀಡಿದೆ.
ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾಗಿರುವ ಕಿರಣ ಕೆಣಿ ಸೋಮವಾರ ತೆರೆದ ನ್ಯಾಯಾಲಯದಲ್ಲಿ ತೀರ್ಪು ನೀಡಿದರು.
ದಿನಾಂಕ 17, ನವೆಂಬರ್ 2022ರಂದು ಆರೋಪಿತ ಮಾಭ್ಲೆಶ್ವರ ಗೌಡ ಇವರು ಹೊಸದಾಗಿ ಅರಣ್ಯ ಪ್ರದೇಶವನ್ನ ಅತಿಕ್ರಮಿಸಿ, ಹೊಸ ಮನೆ ಕಟ್ಟಲು ಪ್ರಯತ್ನಿಸುತ್ತಿದ್ದಾಗ ಅರಣ್ಯ ಸಿಬ್ಬಂದಿಗಳು ಪ್ರಶ್ನಿಸಿದ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ವಿಶ್ವನಾಥ ನಾಯ್ಕ ಅವರ ಎಡಗೈನ ಹೆಬ್ಬೆರಳನ್ನು ಕತ್ತಿಯಿಂದ ಕಡಿದು, ಅರಣ್ಯ ರಕ್ಷಕ ರಾಜೇಶ್ ಗೌಡ ಅವರಿಗೂ ಹಲ್ಲೆ ಮಾಡಿ, ಸರಕಾರಿ ಕರ್ತವ್ಯಕ್ಕೆ ಆತಂಕ ಮತ್ತು ಚ್ಯುತಿಗೊಳಿದ್ದಲ್ಲದೇ, ಆರೋಪಿತನು ಅರಣ್ಯ ಸಿಬ್ಬಂದಿಗಳ ಮೇಲೆ ಜೀವ ಬೆದರಿಕೆ ಹಾಕಿರುವ ಆರೋಪದ ಅಡಿಯಲ್ಲಿ ಆರೋಪಿತನ ಮೇಲೆ ಭಾರತೀಯ ದಂಡ ಸಂಹಿತೆ ಕಲಂ 333, 332,353, 307, 504, 506 ಅಡಿಯಲ್ಲಿ ಸಿದ್ಧಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲೆಯಲ್ಲಿ ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಈ ಪ್ರಕರಣವು ಜಿಲ್ಲಾದ್ಯಂತ ಸಂಚಲನ ಮೂಡಿಸಿತ್ತು. ಆರೋಪಿತನ ಪರವಾಗಿ ಹಿರಿಯ ವಕೀಲ ರವೀಂದ್ರ ನಾಯ್ಕ ವಾದ ಮಂಡಿಸಿದ್ದು, ವಕೀಲರಾದ ಉದಯ ನಾಯ್ಕ ಮತ್ತು ಕು. ಸುರೇಖ ಅವರು ಸಹಕರಿಸಿದ್ದರು.