ಮುಂಡಗೋಡು: ಕುಡಿತ ಮತ್ತಿನಲ್ಲಿ 15 ಜನರೊಡಗೂಡಿ ಎಎಸ್‌ಐ ಬಾಲಕೃಷ್ಣ ಪಾಲೇಕರ್ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರ ಪುತ್ರ ಬಾಪು ಗೌಡ ಪಾಟೀಲ್ ಎಂಬಾತನನ್ನು ಬಂಧಿಸಲಾಗಿದೆ.
2011ರಲ್ಲಿ ಮುಂಡಗೋಡ ಅರಣ್ಯ ಇಲಾಖೆಯ ಐಬಿಯಲ್ಲಿ ಕುಡಿದ ಮತ್ತಿನಲ್ಲಿ 15 ಜನರ ಜೊತೆ ಸೇರಿ ಎಎಸ್‌ಐ ಮೇಲೆ ಬಾಪು ಗೌಡ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ ಪ್ರಕರಣ ಹಾಗೂ ಎರಡು ಚೆಕ್ ಬೌನ್ಸ್ ಪ್ರಕರಣ ಸಂಬಂಧಿಸಿ ಬಂಧನ ಆದೇಶ ಹೊರಡಿಸಿದೆ.
ಬಾಪು ಗೌಡ ಪಾಟೀಲ್ ವಿರುದ್ಧ ಸೆಕ್ಷನ್ 353, 141,143, 147, 323, 353, 504, 506,149ನಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದರ ವಿಚಾರವಾಗಿ ಎಎಸ್‌ಐ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರೊಂದಿಗೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲೂ ಬಾಪು ಗೌಡ ಪಾಟೀಲ್ ಆರೋಪಿಯಾಗಿದ್ದ ಎನ್ನಲಾಗಿದೆ.
ಕಳೆದ 6 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಬಾಪು ಗೌಡ ಪಾಟೀಲ್ ನನ್ನು ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಮುಂಡಗೋಡು ಪೋಲೀಸರು ಬಂಧಿಸಿದ್ದಾರೆ. ಆರೋಪಿ ಬಾಪು ಗೌಡ ಪಾಟೀಲ್‌ಗೆ ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ.
ಸರಳ, ಸಜ್ಜನ ರಾಜಕಾರಣಿಯಾಗಿ ಕ್ಷೇತ್ರದಾದ್ಯಂತ ಹೆಸರು ಗಳಿಸಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ್, ಈ ಮೊದಲೇ ಮಗನ ನಡುವಳಿಕೆಯ ಕುರಿತು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಸಹ ತಮ್ಮ ಮಗನ ಈ ರೀತಿ ಕೆಲಸಗಳಿಂದಾಗಿ ಜನರೆದುರು ಮುಜುಗರ ಎದುರಿಸುವಂತಾಗಿದೆ.