ಸಿದ್ದಾಪುರ: ಪತ್ರಕರ್ತ, ಸಾಮಾಜಿಕ ಕಳಕಳಿ ಹೊಂದಿದ ಕೆಕ್ಕಾರ್ ನಾಗರಾಜ್ ಭಟ್ 2023 ನೇ ಸಾಲಿನ ಪ್ರತಿಷ್ಠಿತ ‘ಕೆ.ಶಾಮರಾವ್ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಪಟ್ಟಣ ನಿವಾಸಿಯಾದ ಕೆಕ್ಕಾರ ನಾಗರಾಜ ಭಟ್ ಕಳೆದ 37 ವರ್ಷಗಳಿಂದ ಪತ್ರಿಕಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ನಾಡಿನ ಅನೇಕ ದಿನಪತ್ರಿಕೆಗಳಲ್ಲಿ, ಸಾಪ್ತಾಹಿಕಗಳಲ್ಲಿ ನಾಗರಾಜ ಭಟ್ಟರ ನೂರಾರು ಲೇಖನಗಳು ಪ್ರಕಟವಾಗಿವೆ. ಸಿದ್ದಾಪುರ ತಾಲೂಕಿನಲ್ಲಿ ನಡೆದ ಅಪ್ರತಿಮ ಸ್ವಾತಂತ್ರ್ಯ ಸಂಗ್ರಾಮ ಕುರಿತ “ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಕೃತಿಯನ್ನು ನಾಗರಾಜ ಭಟ್ಟರು ಇತ್ತೀಚೆಗಷ್ಟೇ ಹೊರತಂದಿದ್ದಾರೆ. ಸಿದ್ದಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಉ.ಕ.ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದು, ಸಿದ್ದಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಪತ್ರಿಕಾ ಮಂಡಳಿಯ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗಣೇಶ ಹೆಗಡೆ ದೊಡ್ಮನೆ ಅವರ ಜನ್ಮ ಶತಮಾನೋತ್ಸವ ವರ್ಷದ ನೆನಪಿನಲ್ಲಿ ಮೂಡಿಬಂದ ಗ್ರಂಥ “ಸೂರ್ಯ ವರ್ಚಸ್ವಿ”ಯ ಸಂಪಾದಕರಾಗಿ, ಜಿಲ್ಲಾ ಸಾಹಿತ್ಯ ಸಮ್ಮೇಳನದ “ಕಂಗು ಕದಿರು” ಸ್ಮರಣ ಸಂಚಿಕೆ ಹಾಗೂ ಟಿಎಂಎಸ್ ಅಮೃತ ಮಹೋತ್ಸವದ ನೆನಪಿನ ಸಂಚಿಕೆ “ಅಮೃತ ವರ್ಷ”ದ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ರಾಜ್ಯದ ಏಕೈಕ ಕನ್ನಡಾಂಬೆ ಎಂದೇ ಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಭುವನಗಿರಿಯ ಶ್ರೀ ಭುವನೇಶ್ವರೀ ಮಾತೆಯ ಸನ್ನಿಧಿಯಲ್ಲಿ ಆಡಳಿತ ಮಂಡಳಿಯ ಸಹಕಾರದೊಂದಿಗೆ 2006 ರಿಂದ ಕನ್ನಡ ರಾಜ್ಯೋತ್ಸವದ ದಿನದಂದು “ಮಾತೃವಂದನಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆಸಲ್ಲಿಸಿದ ಸಾಧಕರನ್ನು ಗುರುತಿಸಿ “ಶ್ರೀ ಮಾತಾ ಅನುಗ್ರಹ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಾ ಬಂದಿದ್ದಾರೆ. ಆರ್ಥಿಕವಾಗಿ ತೊಂದರೆಯಲ್ಲಿರುವ ರೋಗಿಗಳು, ಪ್ರತಿಭಾವಂತ ವಿದ್ಯಾರ್ಥಿಗಳು ಸಹಾಯ ಯಾಚಿಸಿದರೆ ತಕ್ಷಣ ಸ್ಪಂದಿಸಿ ಕೈಲಾದ ಸಹಾಯ ಮಾರ್ಗದರ್ಶನ ನೀಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಹಲವಾರು ಸಲ ರಕ್ತದಾನ ಮಾಡಿದ್ದಾರೆ.
ಕೆಕ್ಕಾರ ನಾಗರಾಜ ಭಟ್ಟರ ಪತ್ರಿಕಾರಂಗ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಸೇವೆಯನ್ನು ಅನುಲಕ್ಷಿಸಿ ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರು “ವಿದ್ವತ್ ಸಂಮಾನ”ದ ಗೌರವ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯಿಂದ “ಶ್ರೀ ಜಿ.ಎಸ್.ಹೆಗಡೆ ಅಜ್ಜೀಬಳ” ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಯಕ್ಷಗಾನ ಕಲಾವಿದರ ಪರಿಚಯಾತ್ಮಕ ಲೇಖನ ಹಾಗೂ ಯಕ್ಷಗಾನ ಪ್ರದರ್ಶನಗಳ ವಿಮರ್ಶೆಗಾಗಿ “ಶ್ರೀ ಆಂಜನೇಯ ಕೃಪಾ ಯಕ್ಷವೃಂದ ಕೇಡಲಸರ” ಇವರಿಂದ “ಯಕ್ಷರಾಜ ಪ್ರಶಸ್ತಿ” ದೊರೆತಿದೆ. “ಕದಂಬಸೈನ್ಯ” ಕನ್ನಡಪರ ಸಂಘಟನೆಯಿಂದ “ಕದಂಬರತ್ನ” ಪ್ರಶಸ್ತಿ, “ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ”ದಿಂದ “ಕನ್ನಡ ಭೂಷಣ” ಪ್ರಶಸ್ತಿ ಸಂದಿದೆ. “ಆಭಾರಿ ಟ್ರಸ್ಟ ಬೆಂಗಳೂರು” ಇವರಿಂದ “ಸಾಧಕ ಗೌರವ ಸನ್ಮಾನ”, ಸಿದ್ದಾಪುರ ಲಯನ್ಸನಿಂದ ವಿವಿಧ ಕ್ಷೇತ್ರಗಳಲ್ಲಿನ ಸೇವೆಗಾಗಿ “ಗೌರವ ಸನ್ಮಾನ”ವೂ ನಾಗರಾಜ ಭಟ್ಟರಿಗೆ ದೊರೆತಿದೆ. ಇದೇ ಜ.28 ರಂದು ಶಿರಸಿಯಲ್ಲಿ ಜರುಗಲಿರುವ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಕೆಕ್ಕಾರ ನಾಗರಾಜ ಭಟ್ಟರಿಗೆ 2023 ನೇ ಸಾಲಿನ ಪ್ರತಿಷ್ಠಿತ ‘ಕೆ.ಶಾಮರಾವ್ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ.