ದಾಂಡೇಲಿ : ದೇಶದ ಪ್ರಜೆಗಳು ಜಾತಿ, ಮತ, ಪಂಥ, ಹಣ ಹಾಗೂ ಆಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ಮತದಾನ ಮಾಡಿದರೆ ಮಾತ್ರ ಅತ್ಯುತ್ತಮ ಶಾಸಕಾಂಗ ರೂಪ ತಾಳಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಅಂತಹ ಪ್ರಾಮಾಣಿಕತೆಯನ್ನು ಮೆರೆಯುವುದರ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ ಎಂದು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಧೀಶರಾದ ರೋಹಿಣಿ.ಡಿ.ಬಸಾಪುರ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕಾಡಳಿತ, ತಾಲೂಕು ಕಾನೂನು ಸೇವಾ ಸಮಿತಿ ದಾಂಡೇಲಿ ಹಾಗೂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಇವರುಗಳ ಸಂಯುಕ್ತಾಶ್ರಯದಲ್ಲಿ 14 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಪಾತ್ರ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ, ಭಾರತದಲ್ಲಿ ಚುನಾವಣಾ ಆಯೋಗ ಆರಂಭವಾದ ದಿನವನ್ನು ಮತದಾರರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು, ಮತದಾನದ ಕುರಿತು ಅರಿವನ್ನು ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು. ಗದಗ ಜಿಲ್ಲೆಯ ಪ್ರಾಧ್ಯಾಪಕರಾದ ಪ್ರೊ, ಬಸವರಾಜ ಪೂಜಾರ, ಹಾಗೂ ಪ್ರೊ ಬಿ. ಎಮ್. ನದಿಮುಲ್ಲಾ, “ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಡಾ. ಬಸವರಾಜ ಎನ್. ಅಕ್ಕಿ ಹಾಗೂ ಪ್ರೊ. ಯು. ಎಸ್. ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೋಪಿನಾಥ ಚೌಹಾಣ ವಿದ್ಯುನ್ಮಾನ ಮತ ಯಂತ್ರದ ವ್ಯವಸ್ಥೆಯ ಪ್ರಾತ್ಯಕ್ಷಿಕೆಯನ್ನು ನೀಡಿದರು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓ ಗಳಿಗೆ ಹಾಗೂ ತಹಶೀಲ್ದಾರ್ ಕಚೇರಿಯಿಂದ ಸಂಘಟಿಸಿದ ವಿವಿಧ ಸ್ಪರ್ಧೆಗಳಲ್ಲಿ ಹಾಗೂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ. ಎಂ. ಡಿ. ಒಕ್ಕುಂದ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಸೀರ ಅಹ್ಮದ ಜಂಗೂಭಾಯಿ ಸ್ವಾಗತಿಸಿದರು. ಅಶ್ವಿನಿ ಬಿರಾದಾರ ವಂದಿಸಿದರು. ಸೌಮ್ಯ ನೇತ್ರೇಕರ ನಿರೂಪಿಸಿದರು.