ಶಿರಸಿ: 75ನೇ ಗಣರಾಜ್ಯೋತ್ಸವ ಪ್ರಯುಕ್ತ ಜೀವಜಲ ಕಾರ್ಯಪಡೆ ಹಾಗೂ ಇಲ್ಲಿನ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಹಾಗೂ ನಾರಾಯಣಗುರು ನಗರದ ನಾಗರಿಕರಿಂದ ಮಾರಿಕಾಂಬಾ ಕ್ರೀಡಾಂಗಣದ ಹಿಂಬದಿಯ ನಗರದ ಹುಬ್ಬಳ್ಳಿ ರಸ್ತೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಿತು. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ನೇತೃತ್ವದಲ್ಲಿ ಜೆಸಿಬಿಗಳನ್ನು ತರಿಸಿ ರಸ್ತೆಯ ಅಕ್ಕಪಕ್ಕ ಸ್ವಚ್ಛತೆ ಮಾಡಿಸಿದರು.
ಈ ವೇಳೆಗೆ ಮಾತನಾಡಿದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಸ್ವಚ್ಛ ಭಾರತ ಎಂದು ಸರಕಾರ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಆದರೆ ಜನರು ರಸ್ತೆ ಬದಿಗೆ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹಾಕುತ್ತಿರುವುದು ವಿಷಾದನೀಯ. ಇದೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದನಕರುಗಳು ತಿಂದು ಸಾವಿಗೀಡಾಗುತ್ತಿವೆ. ಮೋದಿಯವರ ಕನಸನ್ನು ನನಸಾಗಿಸಬೇಕು ಎನ್ನುವ ಉದ್ದೇಶದಿಂದ ನಗರದಲ್ಲಿ ಮೊದಲಿನಿಂದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ನಮ್ಮ ನಗರವನ್ನು ನಾವೇ ಸ್ವಚ್ಛವಾಗಿ ಇಡಬೇಕಿದೆ. ಸ್ಥಳೀಯ ಆಡಳಿತವಾದ ನಗರ ಸಭೆ, ಗ್ರಾ.ಪಂ ಮೇಲೆ ಗೂಬೆ ಕೂರಿಸುವುದಕ್ಕಿಂತ ನಾವೇನು ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಹೀಗಾಗಿ ಜನರು ಸ್ವಚ್ಛತೆಗೆ ಸಹಕರಿಸಬೇಕು ಎಂದರು.
ಆರ್‌ಎನ್‌ಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಶೆಟ್ಟಿ ಮಾತನಾಡಿ, ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ಪ್ರತಿ ವಾರ ಸ್ವಚ್ಛತೆ ಮಾಡುತ್ತಿದ್ದಾರೆ. ಆದರೆ ಜನರು ನಿರಂತರ ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದಾರೆ. ಜನರಿಗೆ ಈ ಕುರಿತು ಜಾಗೃತಿ ಅಗತ್ಯ. ಹಸಿ ಕಸ, ಒಣ ಕಸ ಬೇರ್ಪಡಿಸಿ ನಗರಸಭೆ ಗ್ರಾ.ಪಂ ಕಸ ನಿರ್ವಹಣೆಗೆ ಕೊಡಬೇಕು. ಜನರು ರಸ್ತೆ ಬದಿಗೆ ಕಸ ಚೆಲ್ಲುವುದನ್ನು ತಕ್ಷಣ ನಿಲ್ಲಿಸಬೇಕು. ಪ್ರತಿ 15 ದಿನಗಳಿಗೆ ಒಮ್ಮೆ ನಗರದ ಹುಬ್ಬಳ್ಳಿ ರಸ್ತೆ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಿದ್ದೇವೆ ಎಂದರು. ಈ ವೇಳೆಯಲ್ಲಿ ಪ್ರಶಾಂತ ಹೆಗಡೆ, ಸತೀಶ ನಾಯ್ಕ, ಆನಂದ ಬಿಜಿ, ವೆಂಕಟೇಶ ಬಡಿಗೇರಿ, ಕೃಷ್ಣ ಎಂ, ಗಜಾನನ ನಾಯ್ಕ, ಸಂಜಯ ಕೂರ್ಸೆ, ನವೀನ ಶೆಟ್ಟಿ, ಶಾಂತಾರಾಮ ಭಟ್ಟ, ನಾಗರಾಜ, ಅನಂತ ನಾಯಕ, ಮಲ್ಲಿಕಾರ್ಜುನಪ್ಪ ಕೋರಿ ಮತ್ತಿತರರು ಇದ್ದರು.