ಕಾರವಾರ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದ ಟ್ಯಾಕ್ಸಿ/ಗೂಡ್ಸ್ ಸಹಾಯಧನ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 511 ಅರ್ಜಿಗಳನ್ನು ಹಾಗೂ ಪ್ಯಾಸೆಂಜರ್ ಆಟೋರಿಕ್ಷಾ ಸಹಾಯಧನ ಯೋಜನೆಯಡಿ ಸಲ್ಲಿಕೆಯಾಗಿದ್ದ 141 ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅರ್ಹ ಫಲಾನುಭವಿಗಳನ್ನು ಪಾರದರ್ಶಕ ರೀತಿಯಲ್ಲಿ ಆಯ್ಕೆ ಮಾಡಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಈ ಆಯ್ಕೆ ಸಮಿತಿಯ ಮೂಲಕ ಟ್ಯಾಕ್ಸಿ/ಗೂಡ್ಸ್ ಸಹಾಯಧನ ಯೋಜನೆಯಡಿ 6 ಮಂದಿಯನ್ನು ಮತ್ತು ಪ್ಯಾಸೆಂಜರ್ ಆಟೋರಿಕ್ಷಾ ಸಹಾಯಧನ ಯೋಜನೆಯಡಿ 4 ಮಂದಿಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳ ಸಮ್ಮುಖದಲ್ಲೇ, ಚೀಟಿ ತೆಗೆಯುವ ಮೂಲಕ ಸಂಪೂರ್ಣ ಪಾರದರ್ಶಕತೆಯಿಂದ ಕೂಡಿರುವಂತೆ ಆಯ್ಕೆ ಪ್ರಕ್ರಿಯೆ ನಡೆಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದ ಜಿಲ್ಲಾಅಧಿಕಾರಿ ಎಸ್.ಯು.ಪೂಜಾರ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆನಂದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಉಪಸ್ಥಿತರಿದ್ದರು.