ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಸಂಹಿತಾ ಮ್ಯೂಸಿಕ್ ಫೋರಂನ ಹದಿನಾಲ್ಕನೇ ವಾರ್ಷಿಕ ವಿಶೇಷ ಸಂಗೀತ ಸಮ್ಮೇಳನ ಯೋಗಮಂದಿರದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಗಾಯನ-ವಾದನ ಕಾರ್ಯಕ್ರಮಗಳು ಬೆಳಗ್ಗೆಯಿಂದ ಸಂಜೆಯವರೆಗೆ ಅತ್ಯುತ್ತಮವಾಗಿ ಮೂಡಿಬಂದವು. ಕಾರ್ಯಕ್ರಮವನ್ನು ಮಲೆನಾಡು ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಎಲ್.ಎಮ್. ಹೆಗಡೆ ಗೋಳಿಕೊಪ್ಪ ಉದ್ಘಾಟಿಸಿ, ಮಾತನಾಡಿ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರಕ್ಕೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಜಿಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್ ಮಾತನಾಡಿ, ಸಂಸ್ಥೆಯ ಪ್ರತೀ ಹೆಜ್ಜೆಗಳು ಸಮಾಜಕ್ಕೆ ಸಂಸ್ಕೃತಿಯ ಸಂದೇಶ ನೀಡುವಂಥವಾಗಿವೆ ಎಂದರು. ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಸಮಾಜ ಸಂಸ್ಕೃತಿ ಮತ್ತು ಸಂಪ್ರದಾಯದ ಕಡೆ ಒಲವನ್ನು ತೋರಬೇಕು ಎಂದರು.ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಾತನಾಡಿ, ಸ್ಥಳೀಯ ಪರಿಸರದಲ್ಲಿನ ಪ್ರತಿಭೆಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುಬ್ರಾಯ ಹೆಗಡೆ ಕುಪ್ಪನಮನೆ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಸಂಸ್ಥೆ ಇನ್ನೂ ಉತ್ತಮ ಸಾಧನೆ ಮಾಡುವ ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಬಲಾ ವಾದ್ಯ ತಯಾರಕ ಹನುಮಂತಪ್ಪ ಬಗರೀಕರ್ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು ಹಾಗೂ ನೆಮ್ಮದಿ ಕುಟೀರಕ್ಕೆ ದೇಣಿಗೆ ಸಮರ್ಪಣೆ ಮಾಡಲಾಯಿತು. ಗಜಾನನ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಕೆರೆಗದ್ದೆ ಹಾಗೂ ಅಶ್ವಿನಿ ಹೆಗಡೆ ಪರಿಚಯಿಸಿದರು. ಗಣೇಶ ಬಿಳೇಕಲ್ ಹಾಗೂ ವಾಣಿಶ್ರೀ ಪ್ರಭು ನಿರೂಪಿಸಿದರು. ಗಿರೀಶ ಹೆಗಡೆ ವಂದಿಸಿದರು.
ಗಾಯನ ಸುಧೆ: ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಗೀತ ಶಿಕ್ಷಕಿ ಕಾವ್ಯಶ್ರೀ ಅನಂತ ಹೆಗಡೆ ವಾಜಗಾರ ತಮ್ಮ ಗಾಯನದಲ್ಲಿ ರಾಗ ಗಾವತಿ ಹಾಗೂ ಭಕ್ತಿ ರಚನೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಪನ್ನಗ ಹೆಗಡೆ ತಬಲಾದಲ್ಲಿ ಹಾಗೂ ಅಜೇಯ ಹೆಗಡೆ ಹಾರ್ಮೋನಿಯಂನಲ್ಲಿ ಸಹಕರಿಸಿದರು. ನಂತರ ಸಂಸ್ಥೆಯ ಸಂಸ್ಥಾಪಕ ಪ್ರಾಚಾರ್ಯ ಅನಂತ ಹೆಗಡೆ ವಾಜಗಾರ ಹಾಗೂ ಇವರ ಹಿರಿಯ ಶಿಷ್ಯರಾದ ಪನ್ನಗ ಹೆಗಡೆ, ವಿವೇಕ ಹೆಗಡೆ, ಶ್ರೀಧರ ಗಾಂವ್ಕರ್ ಇವರುಗಳು ತಬಲಾ ವಾದನದಲ್ಲಿ ತೀನ್ತಾಲ್ನ ವಿವಿಧ ರಚನೆಗಳನ್ನು ಸುಂದರವಾಗಿ ನುಡಿಸಿದರು. ಹಾರ್ಮೋನಿಯಂ ಲೆಹರಾದಲ್ಲಿ ಅಜೇಯ ಹೆಗಡೆ ಸಹಕರಿದರು. ಆಮಂತ್ರಿತ ಕಲಾವಿದರಾದ ನಾಗಭೂಷಣ ಹೆಗಡೆ ಬಾಳೇಹದ್ದ ಹಾಗೂ ನಾಗರಾಜ ಹೆಗಡೆ ಶಿರನಾಲ ಇವರ ಗಾಯನ ಹಾಗೂ ಬಾಂಸುರಿ ಜುಗಲಬಂದಿಯಲ್ಲಿ ರಾಗ್ ಮಾರುಬಿಹಾಗ್ ಹಾಗೂ ರಾಗ್ ಭಾಗೇಶ್ರೀ ಅತ್ಯಾಕರ್ಷಕವಾಗಿ ಮೂಡಿಬಂದವು. ತಬಲಾದಲ್ಲಿ ಅನಂತ ವಾಜಗಾರ , ಹಾರ್ಮೋನಿಯಂನಲ್ಲಿ ಅಜೇಯ ಹೆಗಡೆ ಬೆಣ್ಣೇಮನೆ ಸಹಕಾರ ನೀಡಿದರು.