Slide
Slide
Slide
previous arrow
next arrow

ಕೇಬಲ್ ಟಿವಿಗಳಲ್ಲಿ ಜನರ ಭಾವನೆಗಳಿಗೆ ಧಕ್ಕೆಯಾಗುವ ಕಾರ್ಯಕ್ರಮ ಪ್ರಸಾರವಾದಲ್ಲಿ ಕ್ರಮ; ಡಿಸಿ

300x250 AD

ಕಾರವಾರ: ಜಿಲ್ಲೆಯಲ್ಲಿ ಪ್ರಸಾರವಾಗುತ್ತಿರುವ ಕೇಬಲ್ ಟಿವಿಗಳಲ್ಲಿ ಸಾರ್ವಜನಿಕ ವ್ಯವಸ್ಥೆಗೆ ಭಂಗತರುವಂತಹ ಅಥವಾ ಯಾವುದೇ ಸಮುದಾಯಗಳ ನಡುವೆ ವೈಷಮ್ಯದ ಭಾವನೆ ಬೆಳೆಸುವ, ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದಲ್ಲಿ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಅಧಿನಿಯಮ 1995 ರಡಿಯ ನಿಯಮಗಳನ್ವಯ ಕ್ರಮ ಕೈಗೊಳ್ಳಲಾಗುವುದು ಎಂದುಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರಎಚ್ಚರಿಕೆ ನೀಡಿದರು. ಅವರು ಬುಧವಾರ ನಡೆದ ಜಿಲ್ಲಾ ಮಟ್ಟದ ಕೇಬಲ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಬಲ್ ಟಿವಿಗಳಲ್ಲಿ ಯಾವುದೇ ಧರ್ಮ, ಜನಾಂಗ, ಭಾಷೆ, ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ಅಥವಾ ಯಾವುದೇ ವಿವಿಧ ಧರ್ಮಗಳ, eನಾಂಗಗಳ, ಭಾಷೆಗಳ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿಗಳ ಅಥವಾ ಸಮುದಾಯಗಳ ನಡುವೆ ವೈಷಮ್ಯದ ಭಾವನೆ ಬೆಳೆಸುವ, ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದಲ್ಲಿ ಅಂತಹ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾರ್ಯಚರಣೆಗೆ ಬಳಸುವ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದರು. ಜಿಲ್ಲೆಯಲ್ಲಿರುವ ಎಲ್ಲಾ ಕೇಬಲ್ ನೆಟ್ವರ್ಕ್ಗಳು ಸ್ಥಳೀಯ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಂಡಿರಬೇಕು, ಗ್ರಾಹಕರಿಗೆ ಸೆಟ್ಟಾಪ್ ಬಾಕ್ಸ್ಗಳನ್ನು ಅಳವಡಿಸಬೇಕು, ಪ್ರೀ ಟು ಏರ್ ಚಾನೆಲ್ಗಳನ್ನು ಪ್ರಸಾರ ಮಾಡಬೇಕು, ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಆಡಿಯೋ ಸೌಲಭ್ಯದೊಂದಿಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು, ಗ್ರಾಹಕರಿಂದ ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲು ಮಾಡಬಾರದು ಎಂದರು.

ಸಾರ್ವಜನಿಕರು ಕೇಬಲ್ ಚಾನೆಲ್ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಕುರಿತು ತಮ್ಮ ದೂರುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರವಾರದಲ್ಲಿ ತರೆದಿರುವ ದೂರುಕೋಶಕ್ಕೆ ಸಲ್ಲಿಸಬಹುದಾಗಿದ್ದು, ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂನ ಉಚಿತ ದೂ.ಸಂ. 1077 ಗೆ ಕೂಡಾ ಮಾಹಿತಿ ನೀಡಬಹುದು ಎಂದರು. ಜಿಲ್ಲೆಯ ಕೇಬಲ್ ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಪರಿಶೀಲಿಸುವ ಕುರಿತಂತೆ ರಚಿಸಲಾಗಿರುವ ಜಿಲ್ಲಾ ಮಟ್ಟದ ಕೇಬಲ್ ನಿರ್ವಹಣಾ ಸಮಿತಿಯಲ್ಲಿ, ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು, ಪ್ರ್ರಾಂಶುಪಾಲರು, ನಿರ್ಮಲ ಬಾಲಕಿಯರ ಪದವಿ ಪೂರ್ವ ಕಾಲೇಜು, ಕುಮಟಾ, ಮನಃಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರೇತರ ಸಂಸ್ಥೆ, ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು ಸದಸ್ಯರಾಗಿದ್ದಾರೆ.

300x250 AD

ಶಿರಸಿಯ ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಕೇಬಲ್ ಆಪರೇಟರ್ಗಳು ಮಾಸಿಕ ಶುಲ್ಕ ವಸೂಲಿಗೆ ಬೇರೆ ಬೇರೆ ವ್ಯಕ್ತಿಗಳನ್ನು ಕಳುಹಿಸುತ್ತಿದ್ದು, ಯಾರಿಗೆ ಶುಲ್ಕ ನೀಡಬೇಕು ಎನ್ನುವ ಗೊಂದಲವಾಗುತ್ತದೆ ಅಲ್ಲದೇ ಶುಲ್ಕ ಪಡೆದ ಬಗ್ಗೆ ಸೂಕ್ತ ನಮೂದು ಕೂಡಾ ಮಾಡದೇ ಇರುವುದರಿಂದ ಎರೆಡೆರಡು ಬಾರಿ ಶುಲ್ಕ ನೀಡುವ ಸನ್ನಿವೇಶಗಳು ಎದುರಾಗುತ್ತಿವೆ ಆದ್ದರಿಂದ ಶುಲ್ಕ ವಸೂಲಿಗೆ ಬರುವವರು ಸೂಕ್ತ ಗುರುತಿನಚೀಟಿ ಹಾಕಿಕೊಳ್ಳುವುದು ಹಾಗೂ ಹಣ ಪಡೆದ ಬಗ್ಗೆ ಸರಿಯಾಗಿ ನಮೂದುಗಳನ್ನು ಮಾಡುವಂತೆ ಸೂಚಿಸುವುದು ಉತ್ತಮ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಕೇಬಲ್ ಆಪರೇಟರ್ಗಳು ಏಕರೂಪದ ಗುರುತಿನಚೀಟಿ ಹಾಕಿಕೊಳ್ಳುವಂತೆ ಮತ್ತು ಶುಲ್ಕ ಪಡೆದ ಬಗ್ಗೆ ತಪ್ಪದೆ ನಮೂದು ಮಾಡಲು ತಿಳಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪ್ರಸ್ತುತ ಪ್ರಸಾರವಾಗುತ್ತಿರುವ ಎಲ್ಲಾ ಕೇಬಲ್ ಚಾನೆಲ್ಗಳಲ್ಲಿ ಪ್ರತಿ ದಿನ ಪ್ರಸಾರವಾಗುವ ಕಾರ್ಯಕ್ರಮಗಳ ಮಾಹಿತಿಯನ್ನು ಸಂಗ್ರಹಿಸುವಂತೆ ಜಿಲ್ಲಾ ವಾರ್ತಾಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು ಸಮಿತಿಯ ಎಲ್ಲಾ ಸದಸ್ಯರು ಪ್ರತಿದಿನ ಕೇಬಲ್ ಚಾನೆಲ್ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದರು. ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್ ಕೇಬಲ್ ನಿರ್ವಹಣಾ ಸಮಿತಿಯ ಕಾರ್ಯಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಕಾರವಾರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆರ್.ಎಸ್. ಹೂಗಾರ್, ಶಿಕ್ಷಣ ತಜ್ಞ ಡಾ.ಮಹೇಶ.ಜಿ.ಗೋಳಿಕಟ್ಟೆ, ಮನಃಶಾಸ್ತ್ರಜ್ಞ ಪ್ರಮೋದ ನಾಯ್ಕ, ಸಮಾಜ ಶಾಸ್ತ್ರಜ್ಞ ಜಿ.ಡಿ ಮನೋಜ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top