ಶಿರಸಿ: ಇಂದು ಪ್ರತಿಯೊಂದು ಉದ್ಯಮದಲ್ಲಿ ಕಾಂಪಿಟೆಶನ್ ಹೆಚ್ಚಿದ್ದು, ಗ್ರಾಹಕರ ನಿರೀಕ್ಷೆಯಂತೆ ಕ್ವಾಲಿಟಿ ಕೊಡುವ ಹೆಚ್ಚಿನ ಜವಾಬ್ದಾರಿ ಇರಬೇಕು.ಮುಖ್ಯವಾಗಿ ಇಂದಿನ ಮೊಬೈಲ್ ಯುಗದಲ್ಲಿ ಪ್ರತಿ ವ್ಯಕ್ತಿ ಕೂಡ ಛಾಯಾಗ್ರಾಹಕನಾಗಿದ್ದು, ಪೊಟೋಗ್ರಾಫಿ ಉದ್ಯಮದಲ್ಲಿ ಬಹಳ ಎಚ್ಚರಿಕೆ ವಹಿಸಿ, ಹೆಜ್ಜೆಗಳನ್ನು ಇಡಬೇಕು ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು. ನಗರದ ಝೂ ಸರ್ಕಲ್ ನಲ್ಲಿ ನೂತನವಾಗಿ ಆರಂಭಗೊಂಡ ಛಾಯಾಗ್ರಾಹಕ ಕಿರಣ ಹಾಣಜಿ ಅವರ ಇನ್ಪಿನಿಟಿ ಕ್ಯಾಪ್ಚರ್ ಸ್ಟುಡಿಯೋವನ್ನು ಉದ್ಘಾಟಿಸಿ, ಮಾತನಾಡಿದರು.
ಸಭೆ ಉದ್ಘಾಟಿಸಿದ ಶಿರಸಿ ಟಿಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಹೊಸ ಉದ್ಯಮ ಆರಂಭಿಸುವಾಗ ಆರಂಭದಲ್ಲಿ ಉತ್ಸಾಹ ನಂತರದಲ್ಲಿ ಕೂಡ ಆಸಕ್ತಿ, ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವ ಮೂಲಕ ಜೀವನದ ಯಶಸ್ಸು ಸಾಧಿಸಿ ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ, ಪತ್ರಕರ್ತ ಹಾಗೂ ತಾಲೂಕಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜು ಕಾನಸೂರು ಶುಭ ಹಾರೈಸಿದರು. ಮಹಿಮಾ ಕಿರಣ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು, ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ನಿರೂಪಿಸಿದರು. ಛಾಯಾಗ್ರಾಹಕ ಕಿರಣ ಹಾಣಜಿ ವಂದಿಸಿದರು.