ಕುಮಟಾ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ IQAC, ಇತಿಹಾಸ ಸಂಘ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಇವುಗಳ ಸಹಯೋಗದೊಂದಿಗೆ “ಕುಮಟಾ ತಾಲೂಕಿನ ಇತಿಹಾಸ” ವಿಷಯವಾಗಿ ಆಯೋಜಿಸಿರುವ ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಉಪನ್ಯಾಸಕ ಪ್ರಮೋದ ಹೆಗಡೆಯವರು ಉತ್ತಮ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ನಮ್ಮ ಕುಮಟಾ ತಾಲೂಕಿನ ಇತಿಹಾಸದ ಕುರಿತು ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವನೆ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕುಮಟಾ ತಾಲೂಕಿನಲ್ಲಿ ಮಿರ್ಜಾನ ಕೋಟೆ, ಗೋಕರ್ಣ, ಧಾರೇಶ್ವರ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಸ್ಥಳಗಳಿವೆ. ಇವುಗಳ ಕುರಿತು ವಿಶೇಷ ಅಧ್ಯಯನ ಮಾಡುವ ಅವಶ್ಯಕತೆ ಉಂಟು. ಇತಿಹಾಸದ ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಪ್ರವೃತ್ತಿ ಬೆಳೆಯಬೇಕು. ಅಂದಾಗ ಮಾತ್ರ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರಲು ಸಾಧ್ಯ. ಇತಿಹಾಸವನ್ನು ಅರಿತವರು ಮಾತ್ರ ಹೊಸ ಇತಿಹಾಸ ನಿರ್ಮಿಸಲು ಸಾಧ್ಯ. ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಹೇಳಿದರು.
ಕುಮಟಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ವಿಜಯಾ ಡಿ. ನಾಯ್ಕ, ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ, ನಿವೃತ್ತ ಪ್ರಾಂಶುಪಾಲ ಎಮ್. ಜಿ. ನಾಯ್ಕ್, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರಮೋದ್ ಹೆಗಡೆ, ಉಪನ್ಯಾಸಕರುಗಳಾದ ಐ. ಕೆ. ನಾಯ್ಕ್, ವಿನಾಯಕ ನಾಯ್ಕ್, ಗೀತಾ ಬಿ. ನಾಯ್ಕ್, ಗೋಪಾಲಕೃಷ್ಣ ರಾಯ್ಕರ, ಸಂದೇಶ ನಾಯ್ಕ್ ಹಾಗೂ ಇತರರು ಇದ್ದರು.