ಯಲ್ಲಾಪುರ: ಗ್ರಾಮೀಣ ಭಾಗದಲ್ಲಿ ಕಲಾವಿದರು ಬದುಕಿನ ಕಷ್ಟ ಕಾಲದಲ್ಲೂ, ನಂಬಿದ ಕಲೆಯನ್ನು ಬಿಡದೇ,ಶೃದ್ದೆಯಿಂದ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸಿರುವುದೊಂದು ಕಲಾ ತಪಸ್ಸೇ ಸರಿ ಎಂದು ಉಮ್ಮಚಗಿ ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕ ಡಾ.ಮಹೇಶ ಭಟ್ಟ ಇಡಗುಂದಿ ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಿರಿ ಕಲಾ ಬಳಗ ಇವರ ಆಶ್ರಯದಲ್ಲಿ ಕಲಾ ಸಾಧಕರಿಗೆ ಸನ್ಮಾನಿಸಿ,ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಿರಿ ಕಲಾ ಬಳಗ ಸಾಧಕರನ್ನು ಗುರುತಿಸಿರುವುದು ಉತ್ತಮ ಸಂಪ್ರದಾಯವಾಗಿದೆ. ಕಲೆ ಸಂಸ್ಕೃತಿಗಳ ಕಾರ್ಯಕ್ರಮಗಳು ನಮ್ಮ ಜೀವಂತಿಕೆಯ ಅಭಿವ್ಯಕ್ತಿ ಆಗಿದೆ.ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು. ಶಿಕ್ಷಕ ಡಾ.ನವೀನಕುಮಾರ ಎಜಿ ಮಕ್ಕಳಿಗೆ ಸಾಹಿತ್ಯದ ಆವರಣ ನಿರ್ಮಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಕವಿ ಸುಬ್ರಾಯ ಬಿದ್ರೆಮನೆ ಮಾತನಾಡಿ,ಕಲಾರಾಧನೆ ದೇವತಾರಾಧನೆ ಆಗಿದ್ದು,ಹಬ್ಬ ಹರಿದಿನಗಳಲ್ಲಿ ಇಂತಹ ಮೌಲಿಕ ಕಾರ್ಯಕ್ರಮಗಳ ಮೂಲಕ ಸಮಯ ಸದ್ಬಳಕೆ ಔಚಿತ್ಯ ಪೂರ್ಣ ಎಂದರು. ಪತ್ರಕರ್ತ ವಿ. ಜಿ. ಗಾಂವ್ಕಾರ ಮಾತನಾಡಿ, ಗ್ರಾಮೀಣ ಯುವಕರು ಪಟ್ಟಣದತ್ತ ಮುಖ ಮಾಡಿದ್ದು, ಹಳ್ಳಿಯ ಅಸ್ತಿತ್ವದ ಜೊತೆಗೆ ಕಲೆಯ ಆವರಣ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್ ಆರ್ ಭಟ್ಟ ಬಿದ್ರೆಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಸುಬ್ರಾಯ ಭಾಗ್ವತ್ ,ವೆಂಕಟ್ರಮಣ ಭಾಗ್ವತ್, ಗಣಪತಿ ಭಟ್ಟ, ನರಸಿಂಹ ಕುಂಕಿಮನೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಿರಿ ಕಲಾ ಬಳಗದ ಅಧ್ಯಕ್ಷ ರವೀಂದ್ರ ಭಟ್ಟ ವೈದಿಕರ ಮನೆ ಸ್ವಾಗತಿಸಿ ಪ್ರಸ್ತಾಪಿಸಿದರು.ಪತ್ರಕರ್ತ ಶ್ರೀಧರ ಅಣಲಗಾರ ನಿರೂಪಿಸಿದರು. ನಂತರ ನಂದೊಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಾಲಿಮೋಕ್ಷ ತಾಳಮದ್ದಳೆ ನಡೆಯಿತು.