ಜನರ ಸಮಸ್ಯೆಗೆ 24*7 ಸಹಾಯವಾಣಿ, ಮೊಬೈಲ್ ಆ್ಯಪ್ ಪ್ರಾರಂಭ
ಭಟ್ಕಳ: ಕಳೆದ ಐದಾರು ತಿಂಗಳಿನಿಂದ ಜಿಲ್ಲೆಯ ಜನತೆಯ ಅನೇಕ ಸಮಸ್ಯೆಗಳಿಗೆ ಧ್ವನಿಯಾಗಿದ್ದರ ಪರಿಣಾಮವಾಗಿ ಜಿಲ್ಲೆಯಾದ್ಯಂತ ಕಾರ್ಯಕರ್ತರು ಲೋಕಸಭೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿಯಿಂದ ಅವಕಾಶ ನೀಡಿದರೆ ನಾನೂ ಸ್ಪರ್ಧಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಭಟ್ಕಳದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಜನರ ಸಮಸ್ಯೆಗೆ ಪ್ರಾಮಾಣಿಕ ಧ್ವನಿಯಾಗಿದ್ದರ ಪರಿಣಾಮವಾಗಿ ಅಭಿಮಾನಿಗಳು, ಹಿತೈಷಿಗಳಿಂದ ಉತ್ತರ ಕನ್ನಡ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬ ಒತ್ತಡ, ಆಗ್ರಹ ಹೆಚ್ಚು ಬರುತ್ತಿದೆ. ಹಾಲಿ ಸಂಸದ ಅನಂತಕುಮಾರ ಹೆಗಡೆ ಬಗ್ಗೆ ಅಪಾರ ಗೌರವವಿದೆ. ಅವರ ಅಸಾಧ್ಯವಾದ ಹೋರಾಟದ ಬಗ್ಗೆ ಕೇಳಿದ್ದೇನೆ, ನಾನು ಯಾರಿಗೂ ಪ್ರತಿಸ್ಪರ್ಧಿಯಲ್ಲ. ನಾನು ಬಿಜೆಪಿಯ ಸದಸ್ಯನಾಗಿದ್ದು, ಒಂದು ವೇಳೆ ವರಿಷ್ಠರು ನನ್ನನ್ನು ಗುರುತಿಸಿ ಜವಾಬ್ಧಾರಿ ನೀಡಿದರೆ ಖಂಡಿತ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.
ಭಟ್ಕಳ ಎನ್ನುವಂತದ್ದು ಹಲವಾರು ಮಹಾನ್ ನಾಯಕರನ್ನು ಹುಟ್ಟು ಹಾಕಿದ ಪುಣ್ಯ ಸ್ಥಳ. ಶಿವಾನಂದ್ ನಾಯ್ಕ, ಅನಂತಕುಮಾರ ಹೆಗಡೆ, ಡಾ.ಚಿತ್ತರಂಜನ್ ಇಂತಹ ಮಹಾನ್ ನಾಯಕರನ್ನ ಕೊಟ್ಟ ಊರು ಇದಾಗಿದೆ. ಆದ್ದರಿಂದ ಇದೇ ಊರಿನಲ್ಲಿ ನನ್ನ ಅಭಿವೃದ್ಧಿ ಆಧಾರಿತ ರಾಜಕೀಯ ಚಿಂತನೆಗಳನ್ನು, ಕಲ್ಪನೆಗಳನ್ನು, ದೂರದೃಷ್ಟಿ ವಿಚಾರಗಳನ್ನು, ಹಿಂದುತ್ವ ಆಧಾರಿತ ಅಭಿವೃದ್ಧಿವಾದವನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದರು.
ರಾಜಕೀಯ ಅಧಿಕಾರ ಅನ್ನುವಂತದ್ದು ಯೋಗ್ಯತೆಯ ಜೊತೆ ಅದೃಷ್ಟವನ್ನು ಅವಲಂಬಿಸಿರುತ್ತದೆ. ಯಾರ ಹಣೆಯಲ್ಲಿ ಏನಿದೆ ಎಂಬುದು ಯಾರಿಗೂ ಕೂಡ ಗೊತ್ತಿರುವುದಿಲ್ಲ. ಆದರೆ ಆ ಯೋಗ ಬಂದರೆ ನಾನೇನು ಮಾಡಬೇಕು ಎಂಬ ದೂರದೃಷ್ಟಿ , ಕಲ್ಪನೆ ನಮಗೆ ಇರಬೇಕು. ಆ ಕಲ್ಪನೆ ನನಗೆ ಇದೆ. ಒಬ್ಬ ಸಂಸದಗೆ ಏನೇನು ಅವಕಾಶ ಇದೆ. ಹೇಗೆಲ್ಲಾ ಕೆಲಸ ಮಾಡಬಹುದು ಎಂಬುದನ್ನ ಮಾಡಿ ಇಡೀ ದೇಶಕ್ಕೇ ತೋರಿಸುತ್ತೇನೆ. ನಮ್ಮ ರಾಜ್ಯದ, ನಮ್ಮ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ಅಭಿವೃದ್ಧಿ ಹರಿಕಾರ ದಿ. ರಾಮಕೃಷ್ಣ ಹೆಗಡೆಯವರ ಯೋಜನೆ, ಚಿಂತನೆಯಿಂದ ಪ್ರಭಾವಿತನಾಗಿದ್ದೇನೆ. ನಾನು ಸುಮ್ಮನೇ ಮಾತನಾಡುವವನಲ್ಲ , ಈಗಾಗಲೇ ಹಲವಾರು ಕೆಲಸ ಮಾಡಿ ತೋರಿಸಿದ್ದೇನೆ. ಭಟ್ಕಳದಿಂದ ಕಿತ್ತೂರುವರೆಗೆ ಪ್ರವಾಸ ಮಾಡಿ ಹಲವಾರು ಕಾರ್ಯಕ್ರಮ ಮಾಡಿದ್ದೇನೆ. ಪ್ರತಿ ತಾಲೂಕು ಸಮಸ್ಯೆಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುತ್ತಿದ್ದೇನೆ, ಪ್ರತಿ ತಾಲೂಕುಗಳಲ್ಲಿ ಸಲಹಾ ಸಮಿತಿ ರಚನೆ ಮಾಡುತ್ತೇನೆ ಎಂದರು.
ಹಿಂದುತ್ವ ಮತ್ತು ಅಭಿವೃದ್ಧಿ: ಇವೆರಡರನ್ನೂ ಕೂಡ ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ. ನಾನು ನರೆಂದ್ರ ಮೋದಿಯವರ ಭಕ್ತನಾಗಿದ್ದು, ಅವರಿಗೋಸ್ಕರ ಗೋಕರ್ಣದಲ್ಲಿ ಮಹಾರುದ್ರಯಾಗ ಮಾಡಿಸಿ ಪ್ರಸಾದವನ್ನು ಮೋದಿಯವರಿಗೆ ಕಳಿಸಿದ್ದೇನೆ. ಅವರ ಹಿಂದುತ್ವ ವಿಚಾರ, ದೇಶ ಪ್ರೇಮ ನನಗೆ ಪ್ರಭಾವ ಬೀರಿದೆ. ನಾನು ಸಂಸ್ಕೃತ ಅಧ್ಯಯನ ಮಾಡಿದ್ದು ನಾನು ಹಿಂದೂಪರ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ಹಿಂದೂಗಳ ಪರವಾಗಿ, ಮುಂದೆ ಹಿಂದೂ ಕಾರ್ಯಕರ್ತರ ಪರವಾಗಿ ಹೋರಾಟ ಮಾಡುತ್ತೇನೆ. ಹಿಂದೂಸ್ಥಾನದಲ್ಲಿ ಹಿಂದುಗಳೆಲ್ಲರೂ ಕೂಡ ಹಿಂದುತ್ವದ ಮಾರ್ಗದಲ್ಲಿ ನಡೆಯಬೇಕು ಎನ್ನುವಂತದ್ದು ನನ್ನ ಆಶಯ.
ಅಭಿವೃದ್ದಿ ವಿಚಾರದಲ್ಲಿ ನಾನು ಮೈಸೂರು ಸಂಸದ ಪ್ರತಾಪ ಸಿಂಹ, ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಅವರ ಅಭಿಮಾನಿಯಾಗಿದ್ದೇನೆ. ಒಬ್ಬ ಸಂಸದನಾಗಿ ಹೇಗೆ ಅಭಿವೃದ್ದಿ ಮಾಡಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ಜಿಲ್ಲೆಗೆ ಅನುದಾನ ತರುವಂಥದ್ದು ಯೋಜನೆ ಅನುಷ್ಠಾನ ಮಾಡುವಂಥದ್ದು ಇದರ ಬಗ್ಗೆ ವಿಸ್ತಾರವಾಗಿ ಓದಿಕೊಂಡಿದ್ದೇನೆ. ಅವರಂತೆ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುಬೇಕು ಎನ್ನುವುದು ನನ್ನ ಆಶಯ. ನಮ್ಮ ಜಿಲ್ಲೆಗೊಂದು ಅಭಿವೃದ್ಧಿಗೆ ನೀಲನಕ್ಷೆ ಸಿದ್ಧ ಪಡಿಸುತ್ತೇನೆ.
ನಮ್ಮ ಜಿಲ್ಲೆಗೆ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಎರಡು ಮೆಡಿಕಲ್ ಕಾಲೇಜು ಬೇಕೆ ಬೇಕು. ಒಂದು ಆಸ್ಪತ್ರೆ ದೆಹಲಿಯ ಏಮ್ಸ್ ರೀತಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ನಮ್ಮ ಜಿಲ್ಲೆಗೆ ತರುವ ಪ್ರಯತ್ನ ಮಾಡುತ್ತೇನೆ. ಇನ್ನೊಂದು ಆಸ್ಪತ್ರೆಗಾಗಿ ಜಾಗವನ್ನ ಕಾಯ್ದಿರಿಸಿ ಸಿಎಸ್ಆರ್ ಫಂಡ್ ಮುಖಾಂತರ ಟ್ರಸ್ಟ್ ಹೆಸರಿನಲ್ಲಿ ಮಾಡುತ್ತೇನೆ.
ಉದ್ಯೋಗ ಸೃಷ್ಠಿ: ನಮ್ಮ ಭಟ್ಕಳ ಭಾಗದ ಯುವಕ ಯುವತಿಯರು ಮತ್ತು ಇಡೀ ಜಿಲ್ಲೆಯ ಯುವಕ ಯುವತಿಯರು ಉದ್ಯೋಗಕ್ಕಾಗಿ ಕಷ್ಟ ಪಡುತ್ತಿದ್ದನ್ನು ಕಾಣುತ್ತಿದ್ದೇವೆ. ಸರಕಾರ ಮಟ್ಟದಲ್ಲಿ ಒತ್ತಡ ತಂದು ಪ್ರತಿ ತಾಲೂಕಿನಲ್ಲೂ 50 ರಿಂದ 100 ಎಕರೆ ಇಂಡಸ್ಟ್ರಿಯಲ್ ಎಸ್ಟೇಟ್ ಗಳನ್ನ ನಿರ್ಮಿಸಿ ಉದ್ಯೋಗ ಸೃಷ್ಠಿ ಮಾಡಲು ಪ್ರಯತ್ನ ಮಾಡುತ್ತೇನೆ .ಭಟ್ಕಳದಲ್ಲಿ ಆದಷ್ಟು ಶೀಘ್ರವಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನ ನಿರ್ಮಿಸಿ ಇಲ್ಲಿನ ಯುವತಿಯರಿಗೆ ಉದ್ಯೋಗ ಸಿಗಲು ಪ್ರಯತ್ನ ಮಾಡುತ್ತೇನೆ. ಹೀರೆಗುತ್ತಿಯಲ್ಲಿ 1800 ಎಕರೆ ಇಂಡಸ್ಟ್ರಿಯಲ್ ಜಾಗ ಇದೆ. ಕುಮಟಾ ಭಾಗದಲ್ಲಿ ಸಾವಿರಾರು ಎಕರೆ ಕೈಗಾರಿಕೆ ಮಾಡುವಂತಹ ಜಾಗ ಇದೆ. ಎಲ್ಲವನ್ನೂ ಲೋಕಸಭಾ ಸದಸ್ಯರೆ ಮಾಡಲು ಸಾಧ್ಯವಿಲ್ಲದಿದ್ದರೂ ಎಲ್ಲಾ ಇಲಾಖೆಗೆ ಹೋಗಿ ಒತ್ತಡ ತಂದು ಫ್ಯಾಕ್ಟರಿ ಗಳನ್ನ ನಿರ್ಮಿಸಿ ಲಕ್ಷಾಂತರ ಜನಕ್ಕೆ ಉದ್ಯೋಗ ಕೊಡುವ ವ್ಯವಸ್ಥೆ ನನ್ನಿಂದ ಸಾಧ್ಯವಾದಷ್ಟು ಮಾಡುತ್ತೇನೆ ಎಂದರು.
ರಸ್ತೆ , ರೈಲು, ವಿಮಾನ ನಿಲ್ದಾಣ, ಬಂದರು ನಿರ್ಮಾಣ
ಶಿರಸಿ – ಹುಬ್ಬಳ್ಳಿ, ಶಿರಸಿ -ಕುಮಟಾ ರಸ್ತೆ ಸಂಪೂರ್ಣ ಹಾಳಾಗಿದೆ. ತಾಳಗುಪ್ಪ – ಹಾವೇರಿ , ಅಂಕೋಲಾ – ಹುಬ್ಬಳ್ಳಿ ರೈಲು ಮಾರ್ಗ ಬೇಗ ಪೂರ್ಣಗೊಳಿಸುವ ಕೆಲಸ ಮಾಡುತ್ತೇನೆ. ನಮ್ಮ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಏನು ಬೇಕೋ ಅದನ್ನೆಲ್ಲ ಮಾಡುತ್ತೇನೆ. ಉತ್ತರ ಕನ್ನಡ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತೇನೆ.
ಪ್ರವಾಸೋದ್ಯಮ & ಸಂಪರ್ಕ ಹೆಚ್ಚಿನ ಒತ್ತು ಕೊಡುತ್ತೇನೆ. ಹಲವಾರು ಯೋಜನೆಗಳನ್ನು ತರುತ್ತೇನೆ. ಒಂದು ವೇಳೆ ದೇವರ ದಯೆಯಿಂದ ಜನರ ಆಶೀರ್ವಾದದಿಂದ ಲೋಕಸಭಾ ಸದಸ್ಯನಾದರೆ MP ಸಹಾಯವಾಣಿ (customer care) ಮತ್ತು ಮೊಬೈಲ್ ಆ್ಯಪ್ ಪ್ರಾರಂಭ ಮಾಡುತ್ತೇನೆ. ದಿನದ 24 ಗಂಟೆಯೂ ಕೂಡ ಸರಕಾರದಿಂದ ಅಥವಾ ವ್ಯವಸ್ಥೆಯಲ್ಲಿ ಯಾರಿಗೆ ತೊಂದರೆಯಾದರೂ ನೇರವಾಗಿ ಸಂಪರ್ಕ ಮಾಡಬಹುದು. ತುರ್ತಾಗಿ ಸ್ಪಂದನೆ ಮಾಡುವ ಕೆಲಸ ಆಗುತ್ತದೆ. ಜಿಲ್ಲೆಯ ಮಧ್ಯವರ್ತಿ ಸ್ಥಳದಲ್ಲಿ ಕಾರ್ಯಾಲಯ ಪ್ರಾರಂಭ ಮಾಡುತ್ತೇನೆ. ವರ್ಷದ 365 ದಿವಸ ಯಾರೇ ಕಾರ್ಯಾಲಯಕ್ಕೆ ಸಹಾಯ ಕೇಳಿಕೊಂಡು ಬಂದರೂ ಕೂಡ ಉಚಿತ ತಿಂಡಿ ಮತ್ತು ಭೋಜನ ವ್ಯವಸ್ಥೆ ಮಾಡುತ್ತೇನೆ. ಯಾರೇ ಮನವಿ ಕೊಟ್ಟರೂ ಅವರಿಗೊಂದು ಕಂಪ್ಲೇಂಟ್ ನಂಬರ್ ಕೊಟ್ಟು ಅವರಿಗೆ ಸಂದೇಶ ತಲುಪಿಸಿ ಒಂದು ವಾರದಲ್ಲಿ ಅವರ ಮನವಿ ಸ್ಥಿತಿಯನ್ನು ತಿಳಿಸಲಾಗುವುದು. ಪ್ರತಿ ಮನವಿಯನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಸುಂದರ ಪರಿಸರ, ಕರಾವಳಿ, ದಟ್ಟ ಕಾಡು, ನೂರಾರು ಸುಂದರ ಸ್ಥಳ ವಿರುವ ನಮ್ಮ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ವಿನ ಆದ್ಯತೆ ನೀಡಲಾಗುತ್ತದೆ. ಸರಕಾರದ ಮತ್ತು ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳ ಅನುಷ್ಠಾನವನ್ನ ಸರಿಯಾಗಿ ಮಾಡುವದರ ಬಗ್ಗೆ ಗಮನ ಕೊಡಲಾಗುವುದು. ಅತ್ಯಂತ ಆಸಕ್ತಿ ಉಳ್ಳವನಾಗಿ, ಕ್ರಿಯಾಶೀಲನಾಗಿ ಉತ್ತರಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಹಿಂದುತ್ವದ ರಕ್ಷಣೆಗಾಗಿ ಸೇವೆ ಸಲ್ಲಿಸಲು ಸಂತೋಷದಿಂದ ಎದುರು ನೋಡುತ್ತಿದ್ದೇನೆ. ನನಗೂ ಒಂದು ಅವಕಾಶ ಕೂಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ನನಗೆ ಖಂಡಿತವಾಗಿಯೂ ವಿಶ್ವಾಸವಿದೆ. ಬಿಜೆಪಿ ಪಕ್ಷದ ವರಿಷ್ಠರು ಅವಕಾಶ ಕೊಡುತ್ತಾರೆ ಜನರು ನನಗೆ ಆಶೀರ್ವಾದ ಮಾಡುತ್ತಾರೆ. ಒಂದು ವೇಳೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೂಡ ಅವರ ಪರವಾಗಿ ಕೆಲಸಮಾಡಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನರೇಂದ್ರ ಮೋದಿಯವರಿಗಾಗಿ, ಜಿಲ್ಲೆಗಾಗಿ ದೇಶಕ್ಕಾಗಿ ನನ್ನ ಜೀವವನ್ನೇ ಮುಡಿಪಾಗಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.