ಸಿದ್ದಾಪುರ: ದೇಶದ ಹಾಗೂ ಸಮಾಜದ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಅತ್ಯವಶ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಯಾವುದೇ ತಾರತಮ್ಯ ಇರಬಾರದು. ಹಿರಿಯರು ಕಂಡ ಕನಸು ನನಸಾಗಬೇಕು. ಎಲ್ಲರೂ ನಮ್ಮ ಮಕ್ಕಳು ಎನ್ನುವ ಭಾವನೆ ಇರಬೇಕೆಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲೂಕಿನ ತಾರೇಸರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಎಲ್ಲ ಸೌಲಭ್ಯವನ್ನು ನೀಡುತ್ತಿದೆ. ಸರ್ಕಾರಿ ಶಾಲೆಗಳು ಎಂದು ಯಾರೂ ಹಿಂಜರಿಯುವುದು ಬೇಡ, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರ ತಂಡ ಇದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರೊಂದಿಗೆ ನಮ್ಮ ದೇಶದ ಅಭಿವೃದ್ಧಿಗೆ ಪಾಲಕರು ಮುಂದಾಗಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು.
ಹೆಗ್ಗರಣಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಹರಿಜನ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಮಡಿವಾಳ, ಗ್ರಾಪಂ ಸದಸ್ಯ ನವೀನ ಹೆಗಡೆ, ಬಿಇಒ ಜಿ.ಐ.ನಾಯ್ಕ, ಊರಿನ ಹಿರಿಯರಾದ ಮಂಜುನಾಥ ಹೆಗಡೆ ತಾರೇಸರ,ಸುಬ್ರಾಯ ಹೆಗಡೆ ಮೇಲಿನ ಹಿರೇಕೈ, ಮಂಜುನಾಥ ಹೆಗಡೆ ಕೆಳಗಿನ ಹಿರೇಕೈ,ವೆಂಕಟರಮಣ ತಿಮ್ಮ ನಾಯ್ಕ ಹೆಗ್ಗಾರಬೈಲ್,ಸುಬ್ರಾಯ ಹೆಗಡೆ ಗುಬ್ಬಗೋಣ, ಮಹಾಬಲೇಶ್ವರ ಹೆಗಡೆ ಕೆಳಗಿನ ಹಿರೇಕೈ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ ಗೋಪಾಲ ಹೆಗಡೆ ಮಾಗೋಡಜಡ್ಡಿ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಅತಿಥಿ ಶಿಕ್ಷಕರನ್ನು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಾಗಿಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ವಿನಾಯಕ ಹೆಗಡೆ ಮೇಲಿನ ಹಿರೇಕೈ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಮಹಾಸತಿ ದೇವಾಡಿಗ ವಂದಿಸಿದರು. ವಿನಾಯಕ ಹೆಗಡೆ ಕೆಳಗಿನ ಹಿರೇಕೈ ನಿರ್ವಹಿಸಿದರು.