ಹೊನ್ನಾವರ: ಜನವರಿ 22 ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗುವ ರಾಮಮಂದಿರವು ಔಪಚಾರಿಕ ಸಂಘರ್ಷದ ಗೆಲುವಾಗಿದೆ. ಹಿಂದು ಕಾರ್ಯಕರ್ತರು, ಕರಸೇವಕರ ಬಲಿದಾನ ಹಾಗೂ ಹೋರಾಟದ ಪ್ರತಿಫಲವಾಗಿ ಭವ್ಯ ಮಂದಿರ ನಿರ್ಮಾಣವಾಗಿದೆ. ಹಿಂದೂ ಸಮಾಜದ ಅಜೆಂಡಾ ಇಲ್ಲಿಂದ ಪ್ರಾರಂಭವಾಗಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 500 ವರ್ಷಗಳ ಹೋರಾಟದ ಪರಿಣಾಮ ರಾಮ ಮಂದಿರ ಆಗಿದೆ. ಕಾಶಿ ಮಥುರಾ ಮುಂದಿನ ದಿನಗಳಲ್ಲಿ ಸೇರ್ಪಡೆ ಆಗಲಿದೆ. ನಮ್ಮ ಜಿಲ್ಲೆಯ ಶಿರಸಿ ಸಿ.ಪಿ ಬಜಾರ ಮಸೀದಿ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಇಂದು ಅದು ಕೋರ್ಟಿನಲ್ಲಿ ವಿಚಾರಣಾ ಹಂತದಲ್ಲಿ ಇದೆ. ಹಿಂದೆ ನಮ್ಮ ಕಲ್ಲು-ಕಲ್ಲುಗಳಿಗೆ ಆದ ಅನ್ಯಾಯವನ್ನು ಈಗ ಸರಿಪಡಿಸಬೇಕಾಗಿದೆ. ನಾವು ಅಳಿದರೂ ನಮ್ಮವುಗಳ ಉಳಿವಿಗಾಗಿ ಹೋರಾಟವನ್ನು ನಿರಂತರಗೊಳಿಸಬೇಕು, ಹಿಂದೂ ಜಾಗೃತನಾಗಿದ್ದಾನೆ. ಸಾವನ್ನು ಮೆಟ್ಟಿ ನಿಂತ ಸಮಾಜ ನಮ್ಮದು. ಆದ್ದರಿಂದಲೇ ನಮ್ಮನ್ನು ಮೃತ್ಯುಂಜಯ ಸಮಾಜ ಎಂದರು.
ನಮ್ಮ ಪಕ್ಷ ಪ್ರತಿ ಚುನಾವಣೆಯಲ್ಲಿಯೂ ಮತ ಪಡೆಯುವಲ್ಲಿ ಪ್ರಗತಿ ಹೊಂದಿದೆ. ಅದೇ ರೀತಿಯ ಅಭಿವೃದ್ದಿ ದೇಶದಲ್ಲಿ ಆಗಿದೆ. ದಕ್ಷಿಣ ಭಾರತದಲ್ಲಿಯೂ ಈ ಬಾರಿ ಪಕ್ಷ ಹಿಂದೆಂದೂ ಕಾಣದ ಜಯ ಸಾಧಿಸಬೇಕಿದೆ. ತಮಿಳುನಾಡಿನ ಡಿ.ಎಮ್.ಕೆ ಶಾಸಕರು ಶ್ರೀರಾಮ ಉತ್ತರ ಭಾರತೀಯರ ದೇವರು, ನಮಗಲ್ಲ ಎಂಬ ಉಡಾಫೆ ನಿಲುವು ತಾಳಿದ್ದರು. ಆದರೆ ತಮಿಳುನಾಡಿನಲ್ಲಿ ಅಚ್ಚರಿಯ ಪ್ರಗತಿ ಆಗುತ್ತದೆ. ಶಾಪ ಮತ್ತು ಸಂಕಲ್ಪದ ಕುರಿತು ಮಾತನಾಡಿದ ಸಂಸದರು ಹಿರಿಯರು ಹೇಳಿದಂತೆ ಶುದ್ಧ ಆತ್ಮ ಹೊಂದಿದವನ ಶಾಪ ಎಲ್ಲಯೂ ಹೋಗುವುದಿಲ್ಲ. ಹಿಂದೆ ಗೋ-ಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತರುವಂತೆ ಹಿಂದೂ ಪರ ಸಂಘಟನೆಗಳು ಹಾಗೂ ನೂರಾರು ಸಂತರು ಸಾವಿರಾರು ಗೋವುಗಳೊಂದಿಗೆ ಮುಷ್ಕರ ನಡೆಸಿದ್ದರು. ಆಗ ನಡೆದ ಗೋರಿಬಾರ್‌ನಲ್ಲಿ ಸಂತರ ಹಾಗೂ ಗೋವುಗಳ ಹತ್ಯೆ ಆಗುತ್ತದೆ. ಆ ಹತ್ಯೆ ನಡೆದಿದ್ದು ಗೋಪಾಷ್ಟಮಿ ಸಮಯದಲ್ಲಿ. ಆ ಘಟನೆಯಿಂದ ನಡೆದಾಡುವ ದೇವರೆಂದೆ ಪ್ರಸಿದ್ಧರಾದ ಧಾರ್ಮಿಕ ಮುಂದಾಳು ಕರಪಾತ್ರಿ ಮಹಾರಾಜ ನೊಂದುಕೊಳ್ಳುತ್ತಾರೆ. ಅವರು ಆ ಸಮಯದಲ್ಲಿ ಸಂತರ ಹತ್ಯೆ ಕ್ಷಮಿಸಬಹುದು ಆದರೆ ಗೋವುಗಳ ಹತ್ಯೆ ಕ್ಷಮಿಸಲಾಗದು ಎಂದಿದ್ದರು. ಆಶ್ಚರ್ಯ ಎನ್ನುವಂತೆ ಸಂಜಯ ಗಾಂಧಿ, ಇಂದಿರಾ ಗಾಂಧಿ ಕೊನೆಗೆ ರಾಜೀವ ಗಾಂಧಿ ಎಲ್ಲರೂ ಸಾವಿಗಿಡಾಗಿದದ್ದು ಅದೇ ಗೋಪಾಷ್ಟಮಿಯಂದೆ ಎಂದರು.
1948ರಿಂದ ಅಯೋಧ್ಯೆಯ ಬಾಬರಿ ಮಸೀದಿ ಬಳಿಯ ರಾಮಲಲ್ಲಾ ಮೂರ್ತಿ ಎದುರು ದೀಪ ಬೆಳಗಿ ಕರ ಸೇವೆ ಆರಂಭವಾಗುತ್ತದೆ. ಹೋರಾಟ ಮುಂದುವರೆಯುತ್ತದೆ. ಕೆ.ಕೆ. ನಾಯರ್ ಪ್ರಕರಣ ದಾಖಲಿಸುತ್ತಾರೆ. ಯೋಗಿ ಆದಿತ್ಯನಾಥರ ಪೀಠದ ಪೂರ್ವಜರು ನಿರಂತರವಾಗಿ ರಾಮಲಲ್ಲನ ಕರ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. ಅದೇ ಪಂಥದ ಪೂರ್ವಜರಿಂದ ಆರಂಭಗೊಂಡ ಈ ಕರ ಸೇವೆ ಅದೇ ಪಂಥದ ಆದಿತ್ಯನಾಥರಿಂದ ಮೂರು ತಲೆ ಮಾರುಗಳ ನಂತರ ಶಿಲಾನ್ಯಾಸಗೊಳ್ಳುತ್ತದೆ. ಅದು ಭಗವಂತನ ಸಂಕಲ್ಪ. ಎಲ್ಲಾ ಕಾರ್ಯಗಳು ದೇವೋತ್ತನ ಏಕಾದಶಿ ದಿನದಂದೇ ನಡೆದದ್ದು ವಿಶೇಷ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಭಾಗ್ಯ ಲೊಕೇಶ ಮೇಸ್ತ, ಜಿಲ್ಲಾ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ತಾಲೂಕ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಗೇರುಸೊಪ್ಪಾ, ಸುರೇಶ ಹರಿಕಂತ್ರ, ಮಾಜಿ ಜಿ.ಪಂ.ಸದಸ್ಯ ದೀಪಕ ನಾಯ್ಕ, ಗಣೇಶ ಪೈ, ಪ.ಪಂ.ಸದಸ್ಯ ವಿಜು ಕಾಮತ್, ಸುರೇಶ ಹೊನ್ನಾವರ, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.