ಅಂಕೋಲಾ: ಕನ್ನಡದ ಗಣ್ಯ ವಿಮರ್ಶಕ, ಪಂಪ ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ಪ್ರೊ. ಜಿ ಎಚ್ ನಾಯಕ ಅವರಿಗೆ ಗೌರವಾರ್ಪಣೆಗೆ ಇಲ್ಲಿನ ಕರ್ನಾಟಕ ಸಂಘದ ವತಿಯಿಂದ ನುಡಿಹಾರ ಗೌರವದ ತೋರಣ ಎನ್ನುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಹಿರಿಯ ಉಪನ್ಯಾಸಕ ಮಹೇಶ ನಾಯಕ ಹೇಳಿದರು.
ಕರ್ನಾಟಕ ಸಂಘದ ವತಿಯಿಂದ ಪಟ್ಟಣದ ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 21 ರವಿವಾರ ಪಟ್ಟಣದ ಸ್ವಾತಂತ್ಯ ಸ್ಮಾರಕ ಭವನದಲ್ಲಿ ಮುಂಜಾನೆ 10.30ಕ್ಕೆ ಕಾರ್ಯಕ್ರಮ ಜರುಗಲಿದೆ. ಜಿ ಎಚ್ ನಾಯಕ ಅವರೊಂದಿಗಿನ ಒಡನಾಟದ ಕುರಿತು ನಾಡಿನ ಸೃಜನಶೀಲ ಬರಹಗಾರರಾದ ವಿವೇಕ ಶಾನಭಾಗ ಮಾತನಾಡಲಿದ್ದಾರೆ. ನಾಯಕರ ವಿದ್ಯಾರ್ಥಿ, ಖ್ಯಾತ ವಾಗ್ಮಿ ಪ್ರೊ. ಎಮ್ ಕೃಷ್ಣೇಗೌಡ ಅರಿವಿನ ಗುರುವಾಗಿ ಎನ್ನುವ ವಿಷಯದ ಕುರಿತು ಮಾತನಾಡಲಿದ್ದಾರೆ. ಕೃಷ್ಣೇಗೌಡ ಮೊದಲ ಬಾರಿಗೆ ತಾಲ್ಲೂಕಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ. ಕರ್ನಾಟಕ ಸಂಘದ ಗೌರವಾಧ್ಯಕ್ಷ ಪ್ರೊ. ಕೇ.ವಿ.ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಅಧ್ಯಕ್ಷ ವಿಠಲದಾಸ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದರು.
ಸಾಹಿತಿ ವಿಠ್ಠಲ ಗಾಂವಕರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದರೂ ಜಿ.ಎಚ್. ನಾಯಕರು ಬಡತನದ ನಡುವೆ ಅರಳಿದ ಕಮಲದಂತೆ. ಪಂಪ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದು ನಾಡಿನ ಶ್ರೇಷ್ಠ ವಿಮರ್ಶಕರಾಗಿ ಪ್ರಸಿದ್ಧಿ ಹೊಂದಿದ್ದಾರೆ. ಹಲವು ಉನ್ನತ ಹುದ್ದೆಗಳು ಅವರಿಗೆ ಒಲಿದು ಬಂದರೂ ಮೈಸೂರಿನಲ್ಲಿ ಕನ್ನಡ ಅಧ್ಯಯನ ಮತ್ತು ಶಿಕ್ಷಕ ವೃತ್ತಿಯ ಪ್ರಾಮಾಣಿಕ ಪ್ರೀತಿಗೆ ಮಣಿದು ಅಲ್ಲಿಯೇ ಬದುಕು ಸವೆಸಿದವರು. ಕರ್ನಾಟಕ ಸಂಘವು ವಿನೂತನ ಕಾರ್ಯಕ್ರಮದ ಮೂಲಕ ಅಂಕೋಲಾ ತಾಲ್ಲೂಕಿನ ಸಾಹಿತ್ಯಸಕ್ತರಿಗೆ ಉತ್ತಮ ಅವಕಾಶವನ್ನು ಒದಗಿಸಿದೆ ಎಂದರು.
ಶಿಕ್ಷಕ, ಯಕ್ಷಗಾನ ಕಲಾವಿದ ರಾಜೇಶ್ ನಾಯಕ ಮಾತನಾಡಿ, ಜಿಎಚ್ ನಾಯಕರು ಪ್ರಭಾವ, ಪ್ರಲೋಭನೆಗೆ ಒಳಗಾಗದ ನೇರ ನಿಷ್ಠುರ ವ್ಯಕ್ತಿತ್ವದ ವಿಮರ್ಶಕ. ಸಾಹಿತ್ಯದ ಕುರಿತು ಪಾರದರ್ಶಕವಾಗಿ ವಿಮರ್ಶೆ ನಡೆಸಿರುವ ಕಾರಣಕ್ಕೆ ಜೀವನದಲ್ಲಿ ಹಲವು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು. ಆದರೂ ತಮ್ಮ ನಿಲುವುಗಳಿಂದ ಹಿಂದೆ ಸರಿದವರಲ್ಲ. ಅಂತವರ ನೆನಪಿನಲ್ಲಿ ತಾಲ್ಲೂಕಿನಲ್ಲಿ ಕಾರ್ಯಕ್ರಮವೊಂದು ವಿಶೇಷವಾಗಿ ನೆರವೇರುತ್ತಿರುವುದು ಅಭಿನಂದನಾರ್ಹ ಎಂದರು. ನಿವೃತ್ತ ಉಪನ್ಯಾಸಕ ಎಸ್ ಆರ್ ನಾಯಕ ಸ್ವಾಗತಿಸಿದರು. ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ ಉಪಸ್ಥಿತರಿದ್ದರು.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಆತುನ್ನತ ಅಧ್ಯಯನ ಕೇಂದ್ರದವರು ರಾಜ್ಯದ ಎಲ್ಲೆಡೆಯ ತಾಳೆಗರಿಯ ಹಸ್ತ ಪ್ರತಿಗಳನ್ನು ಸಂಗ್ರಹಿಸುವ ಮತ್ತು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕ ನೀಲಗಿರಿ ತಳವಾರ ಉಪಸ್ಥಿತರಿರಲಿದ್ದಾರೆ. ಜನವರಿ 19ರ ಒಳಗೆ ಉಪನ್ಯಾಸಕ ಮಹೇಶ ನಾಯಕ ಅವರನ್ನು ಸಂಪರ್ಕಿಸಿ (tel:+919380817835, tel:+919480523617)ಸಾರ್ವಜನಿಕರು ತಮ್ಮಲ್ಲಿರುವ ತಾಳೆಗರಿ ಪ್ರತಿಯನ್ನು ಒಪ್ಪಿಸಬಹುದು ಎಂದು ಸಂಘಟಕರು ತಿಳಿಸಿದರು.