ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆವರಣದಲ್ಲಿ ಸುಮಾರು 50 ವರ್ಷಗಳಿಂದಿದ್ದ ವಾಚಿಂಗ್ ಟವರನ್ನು ತೆರವುಗೊಳಿಸುವ ಕಾರ್ಯವು ಬುಧವಾರ ನಡೆಯಿತು.
ಈ ವಾಚಿಂಗ್ ಟವರ್ ಮೂಲಕ ಇಡೀ ಕಾಗದ ಕಾರ್ಖಾನೆಯ ಆಗುಹೋಗುಗಳನ್ನು ವೀಕ್ಷಣೆ ಮಾಡಲಾಗುತ್ತಿತ್ತು. ಬಹು ಮುಖ್ಯವಾಗಿ ಅಗ್ನಿಶಾಮಕ ದಳದವರು ಪ್ರತಿದಿನ ವಾಚಿಂಗ್ ಟವರಿನ ಮೇಲಕ್ಕೆ ಹತ್ತಿ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಅಗ್ನಿ ಹಾಗೂ ಇನ್ನಿತರ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ವಾಚಿಂಗ್ ಟವರ್ ನೆರವಿಗೆ ಬರುತ್ತಿತ್ತು.
ಇತ್ತೀಚಿನ ಕೆಲವು ವರ್ಷಗಳ ಹಿಂದೆ ಕಾರ್ಖಾನೆಯಲ್ಲಿ ಆರನೇ ವಿಸ್ತರಣಾ ಘಟಕ ನಿರ್ಮಾಣವಾದ ನಂತರದಲ್ಲಿ ಈ ವಾಚಿಂಗ್ ಟವರ್ ನಲ್ಲಿ ಕಾರ್ಖಾನೆಯನ್ನು ವೀಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇತ್ತೀಚಿನ ವರ್ಷಗಳಿಂದ ಇದನ್ನು ಬಳಕೆ ಮಾಡಲಾಗುತ್ತಿರಲಿಲ್ಲ. ಇದರ ಹೊರತಾಗಿಯೂ ಬಹಳ ಹಳೆಯ ವಾಚಿಂಗ್ ಟವರ್ ಆಗಿರುವುದರಿಂದ ತೀವ್ರ ದುಸ್ಥಿತಿಯಲ್ಲಿದ್ದ ಹಿನ್ನಲೆಯಲ್ಲಿ ಯಾವುದೇ ಅನಾಹುತ ನಡೆಯದಿರಲೆಂದು ಇದರ ತೆರವಿಗೆ ಕಾಗದ ಕಾರ್ಖಾನೆ ಮುಂದಾಗಿತ್ತು ಎನ್ನಲಾಗಿದೆ.